ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಹನಿ ನೀರಾವರಿ ಮೂಲಕ ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಸರ್ಕಾರ ರೈತರಿಗೆ ಸಬ್ಸಿಡಿ ದರದಲ್ಲಿ ತುಂತುರು ನೀರಾವರಿ (ಸ್ಪ್ರಿಂಕ್ಲರ್) ಉಪಕರಣಗಳನ್ನು ವಿತರಿಸುತ್ತಿದೆ. ಆದರೆ, ಒಂದು ವರ್ಷದಿಂದ ರೈತರಿಗೆ ಸ್ಪ್ರಿಂಕ್ಲರ್ ಉಪಕರಣಗಳು ಸಿಗುತ್ತಿಲ್ಲ. ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ.
ಮಾರುಕಟ್ಟೆಯಲ್ಲಿ ಸ್ಪ್ರಿಂಕ್ಲರ್ ಸೆಟ್ಗೆ 22ರಿಂದ 25 ಸಾವಿರ ರೂ. ದರವಿದೆ. ಹೀಗಾಗಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ 2015-16 ರಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮೂಲಕ ರೈತರಿಗೆ ಶೇ.90ರಷ್ಟು ಸಬ್ಸಿಡಿಯೊಂದಿಗೆ ತುಂತುರು ನೀರಾವರಿ ಉಪಕರಣಗಳನ್ನು ವಿತರಿಸುತ್ತಿದೆ.
ನರೇಗಲ್ಲ ಹೋಬಳಿಯ ಕೆಲ ಭಾಗದಲ್ಲಿ ಮಸಾರಿ ಪ್ರದೇಶದಲ್ಲಿ ರೈತರು ನೀರಾವರಿ ಕೃಷಿ ಮಾಡುತ್ತಿದ್ದಾರೆ. ರೋಣ, ಗಜೇಂದ್ರಗಡ ತಾಲೂಕಿನಲ್ಲಿ ಪ್ರತಿ ವರ್ಷ 1000-1,200 ರೈತರು ಸ್ಪ್ರಿಂಕ್ಲರ್ ಸೆಟ್ಗಾಗಿ ಅರ್ಜಿ ಸಲ್ಲಿಸುತ್ತಾರೆ, ಅದರಲ್ಲಿ ಅತಿ ಹೆಚ್ಚು ನರೇಗಲ್ಲ ಹೋಬಳಿಯ ರೈತರು ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ಹೋಬಳಿಯ ರೈತರಿಗೆ ಕಳೆದ ವರ್ಷದಿಂದ ಸ್ಪ್ರಿಂಕ್ಲರ್ ಸಿಗುತ್ತಿಲ್ಲ. ಈ ಹಿಂದೆ 2.5 ಇಂಚಿನ ಸ್ಪ್ರಿಂಕ್ಲರ್ ಸೆಟ್ಗೆ 2070 ರೂ. ಹಾಗೂ 2 ಇಂಚಿನ ಸ್ಪ್ರಿಂಕ್ಲರ್ ಸೆಟ್ಗೆ 1932 ರೂ. ರೈತರ ವಂತಿಗೆ, ಸರ್ಕಾರದಿಂದ ಶೇ.90 ರಷ್ಟು ಸಬ್ಸಿಡಿ ಪೂರೈಕೆದಾರರಿಗೆ ಸಿಗುತ್ತಿತ್ತು. ಆದರೆ, ಈಗ ಸರ್ಕಾರ 2.5 ಇಂಚಿನ ಸ್ಪ್ರಿಂಕ್ಲರ್ ಸೆಟ್ಗೆ 1876 ರೂ. ಹಾಗೂ 2 ಇಂಚಿನ ಸ್ಪ್ರಿಂಕ್ಲರ್ ಸೆಟ್ಗೆ 1734 ರೂ. ರೈತರ ವಂತಿಗೆ ನಿಗದಿಮಾಡಿದೆ. ಇದರಿಂದ ಸರ್ಕಾರದಿಂದ ಸಿಗುತ್ತಿದ್ದ ಸಬ್ಸಿಡಿಯೂ ಕಡಿಮೆಯಾಗಿದ್ದರಿಂದ ಪೂರೈಕೆದಾರರು ಉಪಕರಣಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ರೈತರ ವಂತಿಗೆ ಹಣವನ್ನು ಕಡಿಮೆ ಮಾಡಿರುವ ಸರ್ಕಾರ ಸ್ಪ್ರಿಂಕ್ಲರ್ ಪೂರೈಕೆ ಮಾಡುವ ಖಾಸಗಿ ಕಂಪನಿಗಳಿಗೆ ನೀಡುವ ಅನುದಾನ ಹೆಚ್ಚಳ ಮಾಡಿಲ್ಲ. ಇದರಿಂದಾಗಿ ಖಾಸಗಿ ಕಂಪನಿಗಳು ಸ್ಪ್ರಿಂಕ್ಲರ್ ಪೂರೈಕೆಗೆ ಹಿಂದೇಟು ಹಾಕುತ್ತಿವೆ. ಈ ಹಿಂದೆ ನಾಲ್ಕೈದು ಕಂಪನಿಗಳು ಸ್ಪ್ರಿಂಕ್ಲರ್ ಪೂರೈಕೆ ಮಾಡುತ್ತಿದ್ದವು. ಇದರಿಂದ, ಅರ್ಜಿ ಸಲ್ಲಿಸಿದ ರೈತರಿಗೆ ತಕ್ಷಣವೇ ಸ್ಪ್ರಿಂಕ್ಲರ್ ನೀಡಲಾಗುತ್ತಿತ್ತು. ಆದರೆ, ಈಗ ಒಂದೇ ಕಂಪನಿಯು ಪೂರೈಕೆಗೆ ಮುಂದೆ ಬಂದಿದ್ದು, ಎಲ್ಲ ರೈತರಿಗೆ ಸಕಾಲಕ್ಕೆ ಸ್ಪ್ರಿಂಕ್ಲರ್ ಸೆಟ್ ಸಿಗುವುದು ಕಷ್ಟಸಾಧ್ಯವಾಗಿದೆ. ಕಂಪನಿಯು ಉಪಕರಣ ವಿತರಣೆಗೆ ಹಿಂದೆ ಮುಂದೆ ನೋಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ.
ನರೇಗಲ್ಲ ರೈತ ಸಂಪರ್ಕ ಕೇಂದ್ರಕ್ಕೆ ಸ್ಪ್ರಿಂಕ್ಲರ್ ಪೊರೈಸುವಂತೆ 600 ರೈತರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 200 ರೈತರ ಅರ್ಜಿಗಳನ್ನು ಆನ್ಲೈನ್ ನೋಂದಣಿ ಮಾಡಿ ರೈತರ ವಂತಿಗೆ ತುಂಬಲು ತಿಳಿಸಲಾಗಿದೆ. ವಿಜಯಪುರದ ಆರ್.ಎಂ. ಇಂಡಸ್ಟ್ರೀಸ್ ಒಂದೇ ಕಂಪನಿಗೆ ಸ್ಪ್ರಿಂಕ್ಲರ್ ಸೆಟ್ ಪೊರೈಕೆಗೆ ಆದೇಶ ನೀಡಲಾಗಿದೆ. ಅವರಿಂದ ಇಲ್ಲಿಯವರೆಗೆ ಸ್ಪ್ರಿಂಕ್ಲರ್ ಸೆಟ್ ಪೊರೈಕೆಯಾಗಿಲ್ಲ. ಇನ್ನೂ 400 ರೈತರ ಅರ್ಜಿ ಆನ್ಲೈನ್ ಮಾಡುವುದು ಬಾಕಿ ಇದ್ದು, ಆನ್ಲೈನ್ ಮಾಡಲಾದ ರೈತರಿಗೆ ಸ್ಪ್ರಿಂಕ್ಲರ್ ಪೂರೈಕೆ ಪ್ರಾರಂಭಿಸಿದರೆ ಇನ್ನುಳಿದ ಅರ್ಜಿ ಆನ್ಲೈನ್ ಮಾಡಿ, ಸ್ಪ್ರಿಂಕ್ಲರ್ ಸೆಟ್ ವಿತರಿಸಬಹುದು.| ಸಿ.ಕೆ. ಕಮ್ಮಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ನರೇಗಲ್ಲ
ರೈತರ ಕಲ್ಯಾಣಕ್ಕಾಗಿರುವ ಇಲಾಖೆಯಲ್ಲಿ ರೈತರಿಗೆ ಯಾವುದೇ ಉಪಯೋಗವಾಗುತಿಲ್ಲ. ವಿವಿಧ ಉಪಕರಣಗಳಿಗೆ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯುವ ಸ್ಥಿತಿಯಿದೆ. ಬೇಸಿಗೆಯಲ್ಲಿ ನೀರಾವರಿ ಸಹಾಯದಿಂದ ಕೃಷಿ ಮಾಡಲು ಸ್ಪ್ರಿಂಕ್ಲರ್ ಸೆಟ್ ಅವಶ್ಯ. ಆದರೆ, ಅರ್ಜಿ ಸಲ್ಲಿಸಿ 6 ತಿಂಗಳು ಕಳೆದರೂ ಉಪಕರಣ ವಿತರಣೆಯಾಗುತ್ತಿಲ್ಲ. ಇದರಿಂದಾಗಿ ಬೆಳೆ ಒಣಗುವ ಭೀತಿ ಎದುರಾಗಿದೆ. ಆದ್ದರಿಂದ, ತಕ್ಷಣವೇ ಸ್ಪ್ರಿಂಕ್ಲರ್ ಸೆಟ್ ವಿತರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. | ಮೃತ್ಯುಂಜಯ ಧಡೇಸೂರಮಠ ಚಂದ್ರು ಲಕ್ಕನಗೌಡ್ರ, ನರೇಗಲ್ಲ ರೈತರು.
ಅನುದಾನ ಇಲ್ವಂತೆ..!: ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸುತ್ತಿದ್ದ ಸ್ಪ್ರಿಂಕ್ಲರ್ಗಳನ್ನು ಎರಡು ವರ್ಷಗಳಿಂದ ವಿತರಿಸಿಲ್ಲ. ಅಧಿಕಾರಿಗಳನ್ನು ಕೇಳಿದರೆ, ‘ಅದಕ್ಕೆ ಅನುದಾನ ಬಂದಿಲ್ಲ. ಹೀಗಾಗಿ ವಿತರಿಸಿಲ್ಲ’ ಎನ್ನುತ್ತಾರೆ. ಮಸಾರಿ ಭೂಮಿ ಹೊಂದಿರುವ ರೈತರು ಬೇಸಿಗೆ ಪೂರ್ವದಲ್ಲಿ ಹೆಚ್ಚು ಶೆಂಗಾ ಬಿತ್ತನೆ ಮಾಡುತ್ತಾರೆ. ಶೇಂಗಾ ಬೆಳೆಗೆ ಪೂರಕವಾಗುವ ಜಿಪ್ಸಂ ಕೂಡ ರೈತ ಸಂಪರ್ಕ ಕೇಂದ್ರದಲ್ಲಿ ಸಕಾಲದಲ್ಲಿ, ಅಗತ್ಯಕ್ಕೆ ಅನುಗುಣವಾಗಿ ಸಿಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.