ಮಡಿಕೇರಿ: ಆದಿವಾಸಿ ಜನರು ತಮ್ಮದೇ ಆದ ಆಚಾರ-ವಿಚಾರ, ಕಲೆ, ಸಂಸ್ಕೃತಿಯನ್ನು ಹೊಂದಿದ್ದು, ಇಂತಹ ಪ್ರಾಚೀನ ಕಲೆ, ಸಂಸ್ಕೃತಿಯನ್ನು ಪ್ರಪಂಚಕ್ಕೆ ಪಸರಿಸುವಂತಾಗಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಗ್ರ ಗಿರಿಜನ ಯೋಜನಾ ಇಲಾಖೆ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ವಿರಾಜಪೇಟೆ ತಾಲೂಕು ಬಾಳುಗೋಡು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಗಿರಿಜನ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆದಿವಾಸಿ ಗಿರಿಜನರಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆ ನಿಟ್ಟಿನಲ್ಲಿ ಆದಿವಾಸಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಮೆಚ್ಚುವಂತದ್ದು. ಆದಿವಾಸಿ ಗಿರಿಜನರಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಕಲೆ, ಸಂಸ್ಕೃತಿ ಜತೆಗೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಕರೆ ನೀಡಿದರು
ಸರ್ಕಾರದ ವತಿಯಿಂದ ಗಿರಿಜನ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡು ಆದಿವಾಸಿ ಪ್ರತಿಭಾವಂತರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದು ಕೊಂಡು ಆರ್ಥಿಕವಾಗಿ ಸಬಲರಾಗುವತ್ತ ಮನಸ್ಸು ಮಾಡಬೇಕು ಎಂದರು.
ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆದಿವಾಸಿ ಗಿರಿಜನರಿಗಾಗಿ ಹಲವು ವಸತಿ ಶಾಲೆಗಳನ್ನು ಆರಂಭಿಸಿ ಶಿಕ್ಷಣಕ್ಕೆ ಒತ್ತು ನೀಡಿರುವುದನ್ನು ಮರೆಯುವಂತಿಲ್ಲ. ಆ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಸ್ಪರ್ಧಿಸಿರುವುದು ವಿಶೇಷವಾಗಿದೆ. ಸರ್ಕಾರ ಏಕಲವ್ಯ ಮಾದರಿ ಶಾಲೆ ಸೇರಿದಂತೆ ಗಿರಿಜನರಿಗಾಗಿ ವಿದ್ಯಾರ್ಥಿ ನಿಲಯ, ಶಿಷ್ಯವೇತನ, ಪೌಷ್ಠಿಕ ಆಹಾರ ವಿತರಣೆ, ಆರೋಗ್ಯ ಸೇವೆ, ವಾಸಕ್ಕೆ ಯೋಗ್ಯವಾದ ಮನೆ ನಿರ್ಮಾಣ ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿವೆ. ಇದನ್ನು ಸರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದರು.
ಆದಿವಾಸಿಗಳ ಕಲೆ, ಸಂಸ್ಕೃತಿಗೆ ಬೇಕಾದ ಪರಿಕರಗಳನ್ನು ನೀಡಲಾಗುತ್ತಿದ್ದು, ಇವುಗಳನ್ನು ಪಡೆದುಕೊಳ್ಳುವಂತಾಗಬೇಕು. ಪ್ರಾಚೀನ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು. ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ದೊರೆಯಬೇಕು. ಇದನ್ನು ಸರ್ಕಾರ ಮಾಡುತ್ತಿದ್ದು, ಸದ್ವಿನಿಯೋಗ ಮಾಡಿಕೊಳ್ಳುವಂತೆ ಕೆ.ಜಿ.ಬೋಪಯ್ಯ ತಿಳಿಸಿದರು.
ಆದಿವಾಸಿ ಗಿರಿಜನರು ಆಸೆ, ಆಮಿಷಗಳಿಗೆ ಒಳಗಾಗದೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಶಾಸಕರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಮಾತನಾಡಿ, ಆದಿವಾಸಿ ಜನರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳ ಸೌಲಭ್ಯವನ್ನು ಪಡೆದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಆಟ ಪಾಠದಲ್ಲಿ ಮುಂದಿರಬೇಕು. ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಬಾರದು ಎಂದು ಸಲಹೆ ಮಾಡಿದ ಅವರು, ೧೮ ವರ್ಷ ಮೇಲ್ಪಟ್ಟ ಎಲ್ಲಾ ಜನರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಕಡ್ಡಾಯವಾಗಿ ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಗಿರಿಜನರ ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಬ್ಬದ ಮಾದರಿಯಲ್ಲಿ ಗಿರಿಜನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಗಿರಿಜನರ ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವಲ್ಲಿ ಸಾಕಷ್ಟು ಯೋಜನೆಗಳು ಇದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಆದಿವಾಸಿ ಜನರು ಹಲವು ಸಂಕಷ್ಟದ ಬದುಕಿನ ನಡುವೆಯೂ ತಮ್ಮ ಸಂಸ್ಕೃತಿ, ಕಲೆಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಹಾಗೂ ಧನಸಹಾಯಕ್ಕೆ ಅರ್ಹರು ಅರ್ಜಿ ಸಲ್ಲಿಸಬಹುದು. ಆ ನಿಟ್ಟಿನಲ್ಲಿ ಆದಿವಾಸಿಗಳು ಕಲೆ ಮತ್ತು ಸಂಸ್ಕೃತಿ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.
ಏಕಲವ್ಯ ಮಾದರಿ ವಸತಿ ಶಾಲೆಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕೂಟದಲ್ಲಿ ಕ್ಲಾಸಿಕಲ್ ಡ್ಯಾನ್ಸ್‌ನಲ್ಲಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜೀಸ್ಮ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ವಿಜೇತಳಾಗಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿರುವುದಕ್ಕೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸತೀಶ ಅಭಿನಂದಿಸಿದರು. ರಾಜ್ಯ ಮಟ್ಟದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅತೀ ಹೆಚ್ಚು ಪ್ರಶಸ್ತಿ ಪಡೆದು ಮೊದಲ ಸ್ಥಾನದೊಂದಿಗೆ ವಿಜೇತರಾದ ಬಾಳುಗೋಡು ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಹಿರಿಯ ಕಲಾವಿದ ಕುಡಿಯರ ಮುತ್ತಪ್ಪ, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಬಿಟ್ಟಂಗಾಲ ಗ್ರಾ.ಪಂ.ಅಧ್ಯಕ್ಷರಾದ ಟಿ.ಆರ್.ರಮ್ಯಾ, ತಹಶೀಲ್ದಾರ್ ಅರ್ಚನಾ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಇತರರು ಇದ್ದರು.
ಹಬ್ಬದಂತೆ ನಡೆದ ಗಿರಿಜನ ಉತ್ಸವ: ಆದಿವಾಸಿ ಗಿರಿಜನರ ಪ್ರಾಚೀನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಭಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ’ಗಿರಿಜನ ಉತ್ಸವ’ವು ಹಬ್ಬದಂತೆ ಸಡಗರ ಸಂಭ್ರಮದಿಂದ ಜರುಗಿತು. ಜೇನುಕುರುಬ, ಕುಡಿಯ, ಮಲೆಕುಡಿಯ, ಯರವ, ಪಣಿಯ ಸಮಾಜದ ಕಲಾವಿದರು ಒಂದೆಡೆ ಸೇರಿ ತಮ್ಮ ತಮ್ಮ ಸಂಸ್ಕೃತಿ, ಕಲಾ ಪ್ರಕಾರಗಳನ್ನು ಸಾಂಪ್ರದಾಯಿಕ ನೃತ್ಯ ಹಾಗೂ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು.
ನಾಗರಹೊಳೆಯ ಜೆ.ಬಿ.ರಮೇಶ್ ತಂಡ ಗಿರಿಜನ ನೃತ್ಯ, ಬೊಮ್ಮಾಡು ಸೋಮಣ್ಣ ತಂಡದಿಂದ ಕೋಲಾಟ, ನಾಣಚ್ಚಿಯ ಕುಮಾರ ತಂಡದಿಂದ ಜೇನುಕುರುಬ ನೃತ್ಯ, ಕೆ.ಬಾಡಗ ಗ್ರಾಮದ ಬಾಳೆಕೋಹಾಡಿ ರೋಹಿಣಿ ತಂಡದಿಂದ ಆದಿವಾಸಿ ಜಾನಪದ ನೃತ್ಯ, ತೋರ ಗ್ರಾಮದ ಗೋಪಮ್ಮ ತಂಡದಿಂದ ಊರೊಟ್ಟಿಕೋಟ್, ಕಕ್ಕಬ್ಬೆಯ ಕುಡಿಯುರ ಮುತ್ತಪ್ಪರವರ ತಂಡದಿಂದ ಕುಡಿಯರ ನೃತ್ಯ, ಚೆನ್ನಯ್ಯನ ಕೋಟೆಯ ತಮ್ಮಯ್ಯ ಮತ್ತು ಪಾಲಿಬೆಟ್ಟದ ಸಿದ್ದಪ್ಪ ಅವರಿಂದ ಯರವರ ಕುಣಿತ, ಕುಮಾರ ನಾಯಕ್ ತಂಡದವರಿಂದ ಕಂಸಾಳೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು.