ಜಿಲ್ಲೆ

ದಡಾರ-ರುಬೆಲ್ಲಾ ರೋಗ ಹರಡದಂತೆ ಜಾಗೃತಿ ಮೂಡಿಸಿ: ಡಾ.ಬಿ.ಸಿ.ಸತೀಶ

ಮಡಿಕೇರಿ: ಮಕ್ಕಳಿಗೆ ದಡಾರ ಹಾಗೂ ರುಬೆಲ್ಲಾ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರ ವಹಿಸೂದರ ಜತೆಗೆ ಸೂಕ್ತ ಚಿಕಿತ್ಸೆಯನ್ನು ಮಕ್ಕಳಿಗೆ ಕೊಡಿಸುವಲ್ಲಿ ಮುಂದಾಗಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿ ’ಲಸಿಕಾ ಕಾರ್ಯಪಡೆ ಪೂರ್ವಭಾವಿ ಸಮನ್ವಯ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ದಡಾರ- ರುಬೆಲ್ಲಾ ರೋಗವು ಮಕ್ಕಳಿಗೆ ಹರಡದಂತೆ ಕಾಲಕಾಲಕ್ಕೆ ಲಸಿಕೆ ಕೊಡಿಸಬೇಕು. ಲಸಿಕೆ ಕೊಡಿಸುವಲ್ಲಿ ಯಾರೂ ಸಹ ಹಿಂಜರಿಯಬಾರದು. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರ ಸಲಹೆ ಪಡೆದು ದಡಾರ ಹಾಗೂ ರುಬೆಲ್ಲಾ ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಹೇಳಿದರು.


ಆರ್.ಸಿ.ಎಚ್ ಅಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ಮಕ್ಕಳ ಮೈಯಲ್ಲಿ ಕಲೆಗಳು ಅಥವಾ ಗುಳ್ಳೆಗಳು ಕಂಡು ಬಂದಲ್ಲಿ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಮಕ್ಕಳಲ್ಲಿ ಅತಿಸಾರ ಭೇದಿ ಮತ್ತಿತ್ತರ ಕಂಡುಬಂದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಲಸಿಕೆ ದೊರೆಯುತ್ತಿದ್ದು, ವೈದ್ಯರ ಸಲಹೆಯಂತೆ ಲಸಿಕೆ ಕೊಡಿಸಲು ಮುಂದಾಗಬೇಕು ಎಂದು ಮಾಹಿತಿ ನೀಡಿದರು.


ಜಿಲ್ಲೆಯ ಲೈನ್‌ಮನೆಗಳು ಹಾಗೂ ಹಾಡಿಗಳಲ್ಲಿ ವಾಸಿಸುವ ಜನರಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಅರಿವು ಮೂಡಿಸಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕ್ಷಯರೋಗ, ಮಲೇರಿಯ, ಡೆಂಗ್ಯೂ ಚಿಕುನ್ ಗುನ್ಯಾ ಇತರ ಸಾಂಕ್ರಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು.


ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂದ್ ಮಾತನಾಡಿ, ಜಿಲ್ಲೆಯಲ್ಲಿ ಲಿಂಗಾನುಪಾತ ಒಂದು ಸಾವಿರ ಪುರಷರಿಗೆ ೧೦೧೯ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಮಧುಮೇಹ, ಕ್ಯಾನ್ಸರ್ ಇತರೆ ರೋಗ ನಿಯಂತ್ರಣಕ್ಕೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.


ಸಭೆಯಲ್ಲಿ ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ವೆಂಕಟೇಶ್, ಮಕ್ಕಳ ತಜ್ಞ ಡಾ.ಕುಶ್ವಂತ್ ಕೋಳಿಬೈಲು, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಶ್ರೀನಿವಾಸ್, ಡಾ.ಚೇತನ್, ಡಾ.ಯತೀರಾಜು, ಪದವಿ ಪೂರ್ವ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗದಾಮಯ್ಯ, ಬಿಸಿಎಂ ಅಧಿಕಾರಿ ಎನ್.ಮಂಜುನಾಥ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ ಇತರರು ಇದ್ದರು.