ಲಿಂಗಸುಗೂರು: ಕ್ಷಯರೋಗ ಲಕ್ಷಣಗಳು ಕಂಡು ಬಂದರೆ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯಬೇಕು ಎಂದು ಕ್ಷಯರೋಗ ತಾಲೂಕು ಮೇಲ್ವಿಚಾರಕ ರವಿಕುಮಾರ ಹೂಗಾರ ಹೇಳಿದರು.
ತಾಲೂಕಿನ ದೇವರಭೂಪರದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಾ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಕ್ಷಯರೋಗ ವ್ಯಕ್ತಿ ಕೆಮ್ಮುವಾಗ ಕರವಸ್ತ್ರ ಬಳಸಿದರೆ ಮಾತ್ರ ಇತರರಿಗೆ ಹರಡುವುದನ್ನು ತಡೆಗಟ್ಟುಬಹುದು. ಈ ರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ಕಫ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ ಮಾತನಾಡಿ, ಸತತ ಎರಡು ವಾರಗಳಿಂದ ಕೆಮ್ಮು, ಕಫದಲ್ಲಿ ರಕ್ತ, ಎದೆನೋವು, ತೂಕ ಕಡಿಮೆ, ಹಸಿವಾಗದಿರುವ ಲಕ್ಷಣ ಕಂಡು ಬಂದರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು. ಸೊಂಕಿತರಿಗೆ ಉಚಿತ ಚಿಕಿತ್ಸೆ ಜತೆಗೆ ಪೌಷ್ಠಿಕ ಆಹಾರ ಸೇವನೆಗೆ ತಿಂಗಳಿಗೆ 500 ರೂ. ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಸಮುದಾಯ ಆರೋಗ್ಯಾಧಿಕಾರಿ ರಮೇಶ, ಆರೋಗ್ಯ ಸುರಕ್ಷತಾ ಅಧಿಕಾರಿ ಮುಬಿನಾಬೇಗಂ, ಪ್ರಯೋಗಾಲಯ ಮೇಲ್ವಿಚಾರಕ ಮಹಾಂತೇಶ ಬ್ಯಾಳಿ, ಪ್ರಮುಖರಾದ ಗಾಳೆಮ್ಮ ಅಂಬಣ್ಣ, ಹನಮಯ್ಯ ಗದ್ದಿ, ಶಾಮತಮ್ಮ ಗೋದಿಕಲ್ ಇದ್ದರು.