1ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ
-ಎಸ್‌ಪಿ ಅಮರನಾಥ್ ರೆಡ್ಡಿ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಹಿಕರ ಘಟನೆಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೋಟೆಲ್,ಪ್ರವಾಸಿ ತಾಣ ಸೇರಿ ಖಾನಾಪುರ ಅರಣ್ಯ ಪ್ರದೇಶದ ಮೇಲೆ ತೀವ್ರ ನಿಗಾ ವಹಿಸಿಲಾಗಿದ್ದು, ಜಿಲ್ಲೆಯಾದ್ಯಂತ 45 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಎಸ್‌ಪಿ ಅಮರನಾಥ ರೆಡ್ಡಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಳು ಅತ್ಯಂತ ವಿಜೃಂಭಣೆಯಿಂದ ಜರುಗುತ್ತವೆ. ಈ ವೇಳೆ ಅಹಿತಕರ ಘಟನೆಗಳು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಪ್ರಕರಣಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತವೆ. ಅಲ್ಲದೆ, ಗೋವಾ, ಮಹಾರಾಷ್ಟ್ರಕ್ಕೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಡಿ.31ರಂದು ಜಿಲ್ಲೆಯಾದ್ಯಂತ 45 ಚೆಕ್‌ಪೋಸ್ಟ್ ತೆರೆದು ಪ್ರತಿಯೊಬ್ಬರನ್ನು ತಪಾಸಣೆ ನಡೆಸಲು ಸೂಚಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯಾದ್ಯಂತ ಬಿಗಿ ಬಂದೂಬಸ್ತ್‌ಗಾಗಿ ಹತ್ತು ಕೆಎಸ್‌ಆರ್‌ಪಿ, ಹತ್ತು ಡಿಎಆರ್ ತುಕಡಿ, ಐದು ಡಿಎಸ್‌ಪಿ, ಇಬ್ಬರು ಹೆಚ್ಚುವರಿ ಎಸ್‌ಪಿ, 18 ಸಿಪಿಐ, 66 ಪಿಎಸ್‌ಐ ಹಾಗೂ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ತ್ರಿಬಲ್ ರೈಡ್ ಮತ್ತು ಕುಡಿದು ವಾಹನ ಓಡಿಸಿದರೆ ಕ್ರಮ ಜರುಗಿಸಲಾಗುತ್ತಿದೆ. ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸು ಹೋಟೆಲ್‌ಗಳ ಮಾಲೀಕರು ಪೊಲೀಸರಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಸಿಸಿಟಿವಿಗಳನ್ನು ಅಳವಡಿಸಬೇಕು. ಪ್ರವಾಸಿ ತಾಣಗಳಲ್ಲಿ ರಾತ್ರಿ ವೇಳೆ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ಮಧ್ಯಾರಾತ್ರಿ 1 ಗಂಟೆಯ ನಂತರ ಓಡಾಡುವವರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಡಿ.31ರಂದು ಮಧ್ಯರಾತ್ರಿ ಗೋವಾ, ಮಹಾರಾಷ್ಟ್ರದಿಂದ ಬರುವ ವಾಹನಗಳು, ಬೈಕ್‌ಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಅಕ್ರಮ ಚಟುವಟಿಕೆ ಕಂಡು ಬಂದರೆ ತಕ್ಷಣವೇ ಕೇಸ್ ದಾಖಲಿಸಲಾಗುವುದು.ಸಂಭ್ರಮಾಚರಣೆ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವವರ ಕ್ರಮ ವಹಿಸಲಾಗುವುದು. ಪ್ರವಾಸಿ ತಾಣ, ದೇವಸ್ಥಾನಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುತ್ತೇವೆ ಎಂದು ತಿಳಿಸಿದರು.
..........
........ ಕೋಟ್ಸ್ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸರ ರಾತ್ರಿ ಗಸ್ತು ಪ್ರಮಾಣ ಹೆಚ್ಚಿಸಲಾಗುವುದು. -ಅಮರನಾಥ ರೆಡ್ಡಿ, ಎಸ್‌ಪಿ ಬೆಳಗಾವಿ