ಜಿಲ್ಲೆ

ಜಿಲ್ಲಾಡಳಿತದ ನಡೆಗೆ ಕ್ರೀಡಾಪಟುಗಳ ಬೇಸರ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅತ್ಯಂತ ಕುತೂಹಲ ಕೆರಳಿಸಿದ್ದ ಕ್ರಿಕೆಟ್ ವಿಶ್ವಕಪ್‌ನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ವೀಕ್ಷಣೆಗೆ ಎಲ್ಲ ಜಿಲ್ಲಾ ಕ್ರೀಡಾಂಗಣದಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ನಗರದಲ್ಲಿ ಈ ವ್ಯವಸ್ಥೆ ಮಾಡದ ಕಾರಣ ಕ್ರೀಡಾಸಕ್ತರಲ್ಲಿ ಬೇಸರ ಮೂಡಿಸಿತ್ತು.
ಭಾನುವಾರದ ಫೈನಲ್ ಪಂದ್ಯವನ್ನು ಕ್ರೀಡಾಪಟುಗಳು ಸಾರ್ವಜನಿಕರು ವೀಕ್ಷಿಸಲು ಎಂಬ ದೃಷ್ಟಿಯಿಂದ ಬೃಹತ್ ಪರದೆ ಅಳವಡಿಸುವಂತೆ ಇಲಾಖೆ ಶನಿವಾರ ಸಂಜೆ ಆದೇಶ ಹೊರಡಿಸಿತ್ತು. ಆದರೆ ನಗರದಲ್ಲಿ ಜಿಲ್ಲಾಡಳಿತವಾಗಲಿ, ಇಲಾಖೆ ವತಿಯಿಂದ ಎಲ್ಲಿಯೂ ಈ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಬೃಹತ್ ಪರದೆ ವ್ಯವಸ್ಥೆ ಮಾಡಿರಬಹುದು ಎಂಬ ಕಾರಣಕ್ಕೆ ಅನೇಕ ಯುವಕರು ಹಾಗೂ ಸಾರ್ವಜನಿಕರು ಮಧ್ಯಾಹ್ನದ ಹೊತ್ತಿಗೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ಬೃಹತ್ ಪರದೆ ಅಳವಡಿಸಿಲ್ಲ ಎಂಬ ಮಾಹಿತಿ ಅರಿತು ಬೇಸರ ವ್ಯಕ್ತಪಡಿಸಿದರಲ್ಲದೆ, ಕ್ರೀಡಾಂಗಣ ಮುಖ್ಯ ದ್ವಾರದ ಬಳಿಯೇ ನಿಂತು ತಮ್ಮ ಮೋಬೈಲ್‌ಗಳಲ್ಲೇ ಪಂದ್ಯ ವೀಕ್ಷಣೆ ಮಾಡಿದರು.
ಇನ್ನು ಆರ್.ಎನ್. ಶೆಟ್ಟಿ ಕ್ರೀಡಾಂಗಣ ಬಳಿಯೇ ಇರುವ ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿ ಟಿವಿ ವ್ಯವಸ್ಥೆ ಮಾಡಲಾಗಿತ್ತು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮಾತ್ರ ಸಾಮಾನ್ಯ ಟಿವಿಯಲ್ಲೇ ಪಂದ್ಯದ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಹೊರತುಪಡಿಸಿ ಇನ್ನಾವುದೇ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿರಲಿಲ್ಲ.