ಕಿನ್ನಿಗೋಳಿ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಾಮಾಜಿಕ ಸೇವಾ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ.ಕುಂದರ್ ಹೇಳಿದರು.
ಗುತ್ತಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಮತ್ತು ದಾನಿಗಳ ನೆರವಿನಿಂದ ಕೊಡಮಾಡಿದ ಕ್ರೀಡಾ ಸಮವಸ್ತ್ರ ಜೆರ್ಸಿಗಳ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಕ್ಲಬ್ ಸೇವಾ ನಿರ್ದೇಶಕ ಪ್ರೊ.ಕೃಷ್ಣಮೂರ್ತಿ ಮಾತನಾಡಿ, ವಿಶ್ವ ಸಾಕ್ಷರತಾ ದಿನಾಚರಣೆ ಸಂದರ್ಭದಲ್ಲಿ ಪ್ರತಿಯೊಬ್ಬರು ಕ್ರಿಯಾತ್ಮಕ ಸಾಕ್ಷರರಾಗಬೇಕೆಂಬ ಗುರಿ ಇರಿಸಿಕೊಳ್ಳಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಲಭ್ಯವಾಗಬೇಕಾಗಿದೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಹಾಗೂ ದಾನಿ ರಾಮಮೋಹನ್ ವೈ, ತಾಪಂ ಮಾಜಿ ಸದಸ್ಯ ದಿವಾಕರ್ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆಶ್ರಫ್ ಶುಭಹಾರೈಸಿದರು. ಮುಖ್ಯ ಶಿಕ್ಷಕಿ ಡಯಾನ ಸ್ವಾಗತಿಸಿದರು. ಶಿಕ್ಷಕಿ ತನುಜ ಕೆ. ವಂದಿಸಿದರು. ಅನುರಾಧಾ ಸಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.