ಗಂಗಾವತಿ: ಕ್ರೀಡೆಗಳು ಸದೃಢ ದೇಹ ಮತ್ತು ಮನಸ್ಸನ್ನು ಸೃಷ್ಟಿಸುತ್ತಿದ್ದು, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗುವಂತೆ ಸರ್ ಎಂ.ವಿಶ್ವೇಶ್ವರಯ್ಯ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಹೇಳಿದರು.
ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾದಿನಾಚರಣೆಯಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು. ಕ್ರೀಡೆಗಳು ಮಾನಸಿಕ ದೃಢತೆಯನ್ನು ಕೊಡುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಆಟೋಟಗಳತ್ತ ಗಮನಹರಿಸಬೇಕು ಎಂದರು.
ದೈಹಿಕ ಶಿಕ್ಷಕ ಪ್ರದೀಪ್, ಮೇಜರ್ ಧ್ಯಾನ್‌ಚಂದ್ ಅವರ ಕ್ರೀಡಾ ಜೀವನವನ್ನು ನೆನಪಿಸಿ ಕೊಟ್ಟು, ಕ್ರೀಡೆಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ದೈಹಿಕ ಶಿಕ್ಷಕಿ ರಜಿಯಾ, ಹಿರಿಯ ಶಿಕ್ಷಕ ನೀಲಕಂಠಪ್ಪ ಅರಹುಣಸಿ ಇತರರಿದ್ದರು. ಕ್ರೀಡಾದಿನಾಚರಣೆ ನಿಮಿತ್ತ ನರ್ಸರಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.