ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಜನ್ಮದಿನದ ಅಂಗವಾಗಿ ಶ್ರೀ ಮಾರಿಕಾಂಬ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್‌ನಿಂದ ಜೂ.1ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಸಂಘದ ಸದಸ್ಯರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಮುಖರಾದ ಸುವರ್ಣಾ ಶಂಕರ್ ಹೇಳಿದರು.
ಜೂ.10ರಂದು ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನ. ಈ ಪ್ರಯುಕ್ತ ಸಂಘದ ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗಳನ್ನು ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಉದ್ಘಾಟಿಸುವರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ಮೇಘನಾ ಮತ್ತು ಉದ್ದ ಜಿಗಿತ ಸ್ಪರ್ಧಿ ಗೌತಮಿ ಗೌಡ ಮುಖ್ಯ ಅತಿಥಿಯಾಗಿರುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಶ್ವರಪ್ಪ ಅವರು ಮಹಿಳಾ ಸಬಲೀಕರಣಕ್ಕಾಗಿ 2013ರಲ್ಲಿ ಶ್ರೀ ಮಾರಿಕಾಂಬ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸ್ಥಾಪಿಸಿದ್ದರು. ಆರಂಭದಲ್ಲಿ ನಾಲ್ಕು ಕೋಟಿ ರೂ. ಸಾಲ ನೀಡುವ ಮೂಲಕ ಕಾರ್ಯ ಆರಂಭಿಸಿತ್ತು. ಈವರೆಗೆ 1,200ಕ್ಕೂ ಹೆಚ್ಚು ಮಹಿಳಾ ಸದಸ್ಯರಿರುವ 1,000 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ 86 ಕೋಟಿ ರೂ. ಕಿರು ಸಾಲ ವಿತರಿಸಿದೆ ಎಂದರು.
ವಿಜೇತರಿಗೆ ಜೂ.10ರಂದು ಬಹುಮಾನ ವಿತರಿಸಲಾಗುವುದು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ 1,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ನಿಧಿಯನ್ನು ಈಶ್ವರಪ್ಪ ನೀಡುವರು ಎಂದರು. ಪ್ರಮುಖರಾದ ಆರತಿ ಪ್ರಕಾಶ್, ಲಕ್ಷ್ಮೀ ಶಂಕರನಾಯ್ಕ, ರಾಧಾ ರಾಮಚಂದ್ರ, ರೇಖಾ, ಶಶಿಕಲಾ, ಕರಿಬಸಮ್ಮ, ಗೀತಾ, ಮಾಲಾ, ಹರೀಶ್ ಪಾಟೀಲ್, ದೀಪಕ್ ಸಿಂಗ್ ಸುದ್ದಿಗೋಷ್ಠಿಯಲ್ಲಿದ್ದರು.