ಮಂಡ್ಯ: ಪ್ರಸಕ್ತ ಸಾಲಿನ ಕ್ರೀಡಾ ವಸತಿ ನಿಲಯಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಡಿ.16ರಿಂದ 22ರವರೆಗೆ ಜಿಲ್ಲೆಯ ವಿವಿಧೆಡೆ ನಡೆಯಲಿದೆ.
16ರಂದು ಮಂಡ್ಯ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣ, 18ರಂದು ನಾಗಮಂಗಲ ತಾಲೂಕು ಕ್ರೀಡಾಂಗಣ, 19ರಂದು ಪಾಂಡವಪುರದ ಪಾಂಡವ ಕ್ರೀಡಾಂಗಣ, 20ರಂದು ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣ, 21ರಂದು ಮಳವಳ್ಳಿ ಹಾಗೂ 22ರಂದು ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಿಗದಿತ ದಿನದಂದು ಬೆಳಗ್ಗೆ 10.30ಕ್ಕೆ ಪ್ರಕ್ರಿಯೆ ಆರಂಭವಾಗಲಿದೆ.
ವಸತಿ ನಿಲಯಕ್ಕೆ 8ನೇ ತರಗತಿ ಮತ್ತು ಪ್ರಥಮ ಪಿಯುಸಿಗೆ ಪ್ರವೇಶ ನೀಡಲು ಆಯ್ಕೆ ಮಾಡಲಾಗುತ್ತಿದೆ. ತಾಲೂಕಿನಿಂದ ಆಯ್ಕೆಯಾದವರು 2024 ಜ.22 ಮತ್ತು 23ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಆಯ್ಕೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸುತ್ತಾರೆ. ಅಭ್ಯರ್ಥಿಗಳನ್ನು ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್, ಫುಟ್ಬಾಲ್(ಬಾಲಕರಿಗೆ ಮಾತ್ರ), ಜಿಮ್ನಾಸ್ಟಿಕ್ಸ್, ಹಾಕಿ, ಜೂಡೋ, ವಾಲಿಬಾಲ್, ಕುಸ್ತಿ ಕ್ರೀಡೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಮಾಹಿತಿಗೆ ಮೊ.ಸಂ 9740896699, 9916644007 ಮತ್ತು 7353097540 ಯನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.