ಜಿಲ್ಲೆ

ಬಾಲಕಿಯರ ಕ್ರೀಡಾ ಹಾಸ್ಟೆಲ್ ಘೋಷಣೆಗೆ ಸೀಮಿತ

ಮಂಗಳೂರು: ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತರಾಗಿರುವ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮಂಗಳೂರು ಸಹಿತ ರಾಜ್ಯದ 10 ಕಡೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಘೋಷಣೆಯಾದ ತಲಾ 1.5 ಕೋಟಿ ರೂ.ಅನುದಾನ ಇನ್ನೂ ಬಿಡುಗಡೆಗೊಂಡಿಲ್ಲ.

ಮಂಗಳೂರಿನ ಮಂಗಳಾ ಕ್ರೀಡಾಂಗಣ ಬಳಿ ಪ್ರಸ್ತುತ ಕ್ರೀಡಾ ಹಾಸ್ಟೆಲ್ ಇದ್ದು, ಇದರಲ್ಲಿ ಪ್ರೌಢಶಾಲಾ ಬಾಲಕರು ಹಾಗೂ ಬಾಲಕಿಯರು ವಾಸವಿದ್ದಾರೆ. ಆದರೆ ನಿಯಮದ ಪ್ರಕಾರ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಇರಬೇಕು ಎಂಬ ಕಾರಣದಿಂದ ಈಗ ಇರುವ ಹಾಸ್ಟೆಲ್ ಬಳಿಯಲ್ಲೇ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಕ್ರೀಡಾ ಇಲಾಖೆಯ ಇಂಜಿನಿಯರ್‌ಗಳು ಮಂಗಳೂರಿನಲ್ಲಿ ಸ್ಥಳ ಪರಿಶೀಲಿಸಿದ್ದಾರೆ. ಯೋಜನಾ ವರದಿಯನ್ನೂ ಇಲಾಖೆಗೆ ಸಲ್ಲಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿತ್ತು. ಆ ಬಳಿಕ ಕರೊನಾ, ಲಾಕ್‌ಡೌನ್ ಮೊದಲಾದ ಕಾರಣಗಳಿಂದ ಅನುದಾನ ಬಿಡುಗಡೆ ವಿಳಂಬವಾಗಿರುವ ಸಾಧ್ಯತೆ ಇದೆ ಎಂದು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ಇರುವ ಕ್ರೀಡಾ ಹಾಸ್ಟೆಲ್‌ನಲ್ಲಿ 50 ಮಂದಿ ತಂಗಲು ಅವಕಾಶವಿದೆ. ಪ್ರತ್ಯೇಕ ವಸತಿ ವ್ಯವಸ್ಥೆ, ಊಟೋಪಚಾರ ಹಾಗೂ ಆಗಮನ, ನಿರ್ಗಮನದ ವ್ಯವಸ್ಥೆ ಇದೆ. ಹೊಸದಾಗಿ ನಿರ್ಮಾಣವಾಗುವ ಹಾಸ್ಟೆಲ್‌ನಲ್ಲಿ 50 ವಿದ್ಯಾರ್ಥಿನಿಯರಿಗೆ ವಾಸ್ತವ್ಯಕ್ಕೆ ಅವಕಾಶ ಸಿಗಲಿದೆ.

ವಿದ್ಯಾರ್ಥಿನಿಯರ ನಿರಾಸಕ್ತಿ: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆಯಲು ಆಸಕ್ತರಾಗುತ್ತಿಲ್ಲ. ಮನೆಯಿಂದಲೇ ಬಂದು ತರಬೇತಿ ಪಡೆಯುವವರು ಹೆಚ್ಚು. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಕ್ಕೆ ಆಸಕ್ತಿ ವಹಿಸುತ್ತಿಲ್ಲ. ಆದರೆ ಉಳಿದ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೆಲ್ ಅವಕಾಶ ಬಳಕೆ ಮಾಡುತ್ತಿದ್ದಾರೆ.

ಮಂಗಳೂರಿನಲ್ಲಿ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ಬಜೆಟ್‌ನಲ್ಲಿ ಘೋಷಣೆಯಾದ 1.5 ಕೋಟಿ ರೂ. ಬಿಡುಗಡೆಯಾಗಿಲ್ಲ. ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ನೀಲಿನಕ್ಷೆ ಸಿದ್ಧಪಡಿಸಿದ್ದಾರೆ. ಶೀಘ್ರ ಅನುದಾನ ಬಿಡುಗಡೆ ನಿರೀಕ್ಷೆ ಇದೆ.

- ಪ್ರದೀಪ್ ಡಿಸೋಜ ಉಪನಿರ್ದೇಶಕರು, ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ