ಶಿರಹಟ್ಟಿ: ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಪೂರಕವಾಗಿವೆ. ಕ್ರೀಡಾಪಟುಗಳು ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಮನೋಭಾವದ ಪ್ರದರ್ಶನ ತೋರಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಪಂ. ಸಹಯೋಗದಲ್ಲಿ ಪಟ್ಟಣದ ಎಸ್.ಎಂ.ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಬಹುತೇಕ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅವಕಾಶ ಸಿಗದೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸರ್ಕಾರ ಆಯೋಜಿಸಿದ ದಸರಾ, ಗ್ರಾಮೀಣ ಕ್ರೀಡಾಕೂಟಗಳು ಕ್ರೀಡಾ ಪ್ರತಿಭೆ ಗುರುತಿಸಲು ಸಹಕಾರಿಯಾಗಿದೆ’ ಎಂದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಶರಣು ಗೋಗೇರಿ ಮಾತನಾಡಿ, ವ್ಯಕ್ತಿಯ ಶಾರೀರಿಕ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಖೋಖೋ. ವಾಲಿಬಾಲ್, ಮಲ್ಲಕಂಬ, ಕುಸ್ತಿಯಂಥ ಕ್ರೀಡೆಗಳಿಂದ ದೇಹ ಮತ್ತು ಮನಸು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದರು.
ತಾಲೂಕು ಕ್ರೀಡಾಧಿಕಾರಿ ಎಂ.ಡಿ. ತಳ್ಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ. ಇಒ. ಡಾ.ಎನ್.ಎಚ್. ಓಲೇಕಾರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ.ಹವಳದ, ಪಪಂ. ಸದಸ್ಯ ಹೊನ್ನಪ್ಪ ಶಿರಹಟ್ಟಿ, ಸಂದೀಪ ಕಪ್ಪತ್ತನವರ, ಫಕೀರೇಶ ರಟ್ಟಿಹಳ್ಳಿ, ರಾಮು ಕಂಬಳಿ, ಪರಶುರಾಮ ಡೊಂಕಬಳ್ಳಿ ಇದ್ದರು. ಎಂ.ಕೆ. ಲಮಾಣಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.