ಜಿಲ್ಲೆ

ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ಕಲಘಟಗಿ: ದೈಹಿಕ, ಮಾನಸಿಕ ಆರೋಗ್ಯ ಸದೃಢಗೊಳ್ಳಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಪ್ರೊಗ್ರೆಸ್ಸಿವ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ನಂದೀಶ ಪಾಟೀಲ ಹೇಳಿದರು.

ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ವಿದ್ಯಾಲಯ ಅಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ದೊರಕಲು ಸಾಧ್ಯವಾಗುತ್ತದೆ. ಮಕ್ಕಳು ದೈಹಿಕವಾಗಿ ಸದೃಢವಾದರೆ ಮನಸು ಸದೃಢವಾಗಿ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ ಎಂದರು.

ಗರ್ಲ್ಸ್ ಇಂಗ್ಲಿಷ್ ಸ್ಕೂಲ್ ಮುಖ್ಯ ಶಿಕ್ಷಕ ಕೆ.ಐ. ಕೊಂಗಿ ಮಾತನಾಡಿ, ಕ್ರೀಡೆ ನಮ್ಮಲ್ಲಿ ಏಕತೆಯ ಭಾವನೆ ಮೂಡಿಸುತ್ತದೆ. ಕಬಡ್ಡಿ, ಖೋಖೋ, ವಾಲಿಬಾಲ್ ಕ್ರೀಡಗಳು ದೇಹವನ್ನು ಸದೃಢ ಗೊಳಿಸಿದರೆ, ಚೆಸ್, ಟೇಬಲ್ ಟೆನಿಸ್ ನಂತಹ ಕ್ರೀಡೆಗಳು ಮಾನಸಿಕವಾಗಿ ಜ್ಞಾಪಕ ಶಕ್ತಿಯನ್ನ ವೃದ್ಧಿ ಮಾಡುತ್ತದೆ. ಕ್ರೀಡೆ ಯಾವುದಾದರೇನು, ಕ್ರಿಯಾಶೀಲವಾಗಿ ಆಡುವುದೇ ನಿಜವಾದ ಕ್ರೀಡೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಹಾಗೂ ಜನತಾ ಇಂಗ್ಲಿಷ್ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ಪಾಟೀಲಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಸದಾ ಕ್ರಿಯಾಶೀಲರಾಗಿರುತ್ತಾರೆ. ಕ್ರೀಡೆ ನಮ್ಮ ಮುಂದಿನ ಜೀವನಕ್ಕೆ ಅಮೂಲ್ಯ ಭಾಗವಾಗಿರುವುದರಿಂದ ಹೆಚ್ಚಿನ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲೂ ಸಹಾಯಕಾರಿಯಾಗುತ್ತದೆ ಎಂದರು.

ಪ್ರಭಾರಿ ಪ್ರಾಚಾರ್ಯ ವಿ. ಬಿ. ಬೂದನೂರ, ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ, ಆರ್. ಕೆ. ಕಾಂಬಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಎ. ಚಿಕ್ಕನರ್ತಿ, ವಿ.ವಿ. ದೇಶಪಾಂಡೆ, ಎಂ.ಎ. ವರದಾನಿ ಇದ್ದರು.