ಜಿಲ್ಲೆ

ಉತ್ತಮ ಬಾಂಧವ್ಯ ವೃದ್ಧಿಗೆ ಆಟೋಟ ಸಹಕಾರಿ: ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್

ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಯಾಗಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ನಾಡಪ್ರಭು ಕೆಂಪೇಗೌಡಜಯಂತಿ ಅಂಗವಾಗಿ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬಿಬಿಎಂಪಿಯ ಅಧಿಕಾರಿ/ನೌಕರರಿಗೆ ಈ ತಿಂಗಳ 19 ರವರೆಗೆ ಆಯೋಜಿಸಿರುವ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಶುಕ್ರವಾರ ಮಾತನಾಡಿದರು.

ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜತೆಗೆ ಅಧಿಕಾರಿ-ನೌಕರರಲ್ಲಿ ಬಾಂಧವ್ಯ, ಹುಮ್ಮಸ್ಸು ಮೂಡಲಿದೆ. ಕ್ರೀಡೆಯಲ್ಲಿ ಆಸಕ್ತಿಯುಳ್ಳವರು ಮಾತ್ರ ಪಾಲ್ಗೊಳ್ಳದೆ ಕ್ರೀಡಾ ಕೂಟದ ವೇಳೆ ಎಲ್ಲ ಅಧಿಕಾರಿ/ನೌಕರರೂ ಭಾಗವಹಿಸಬೇಕು. ಅದಕ್ಕಾಗಿ ಉತ್ತಮ ಯೋಜನೆ ರೂಪಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಿಗೆ ಹೆಚ್ಚು ಉತ್ತೇಜನ ನೀಡಬೇಕು. ಅದರ ಜತೆಗೆ ಅವರ ಮಕ್ಕಳನ್ನು ಕೂಡಾ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ಯೋಜನೆಗಳನ್ನು ರೂಪಿಸುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು.

ಶಾಲಾ ಮಕ್ಕಳಿಗೆ ತರಬೇತಿ:

ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಪಾಲಿಕೆಯ ಶಿಕ್ಷಣ ಹಾಗೂ ಕಲ್ಯಾಣ ವಿಭಾಗದಿಂದ ಕ್ರೀಡೆ ಸೇರಿ ಇನ್ನಿತರ ವಿಷಯಗಳಲ್ಲಿ ಆಸಕ್ತಿ ಇರುವವರಿಗಾಗಿ ವಿಶೇಷ ಯೋಜನೆ ರೂಪಿಸಲಾಗಿದೆ. ಶಿಕ್ಷಣ ವಿಭಾಗದ ಮೂಲಕ ಶಾಲಾ ಮಕ್ಕಳಲ್ಲಿ ಕ್ರೀಡೆ, ನೃತ್ಯ ಸೇರಿ ಇತರ ಚಟುವಟಿಗೆಳಲ್ಲಿ ಪರಿಣಿತಿ ಪಡೆಯಲು ತರಬೇತಿ ನೀಡುವ ಸಂಘ-ಸಂಸ್ಥೆಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅಧಿಕಾರಿ-ನೌಕರರಿಗೆ ಪ್ರತಿ ವರ್ಷ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ನವೀನ್‌ಕುಮಾರ್ ರಾಜು, ದಕ್ಷಿಣ ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ, ಸಹಾಯಕ ಆಯುಕ್ತ ದಿಲೀಪ್, ಉಪ ನಿರ್ದೇಶಕ ಲೋಕೇಶ್, ಪಾಲಿಕೆಯ ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಹಾಜರಿದ್ದರು.