ಚಿಕ್ಕಮಗಳೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡಾಕೂಟಗಳು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಹಿಂದಿನಿAದಲೂ ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ತಿಳಿಸಿದರು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಗ್ರಾಪಂ ತಳಿಹಳ್ಳ, ತಳಿಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸೋಮವಾರ ಆಯೋಜಿಸಲಾಗಿದ್ದ ವಸ್ತಾರೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೪-೨೫ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮಕ್ಕಳು ಸೋಲಿನಿಂದ ದೃತಿಗೆಡದೆ ಸೋಲನ್ನು ಮೆಟ್ಟಿಲಾಗಿ ಮಾಡಿಕೊಂಡು ಗೆಲುವು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಹಲವಾರು ಪ್ರಯತ್ನಗಳನ್ನು ಕಠಿಣ ಪರಿಶ್ರಮಗಳ ಮೂಲಕ ಮಾಡಿದಾಗ ಮಾತ್ರ ಗುರಿ ತಲುಪುವ ಜೊತೆಗೆ ಯಶಸ್ಸನ್ನು ಕಾಣಲು ಸಾಧ್ಯ. ಈ ಮೂಲಕ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಿದಾಗ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು. ಪಠ್ಯೇತರ ಚಟುವಟಿಕೆಗಳಲ್ಲಿ ಶಾಲಾ, ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ಗುರುತಿಸಿಕೊಳ್ಳಬೇಕು. ಮಕ್ಕಳ ಪ್ರತಿಭೆಯನ್ನು ಹೊರಹಾಕಲು ದೈಹಿಕ ಶಿಕ್ಷಕರ ಪರಿಶ್ರಮ ಸಾಕಷ್ಟಿರುತ್ತದೆ ಎಂದು ತಿಳಿಸಿದರು.
ತಳಿಹಳ್ಳ ಗ್ರಾಪಂ ಅಧ್ಯಕ್ಷ ಸದಾಶಿವ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಆದರೆ ಗುಣಮಟ್ಟದ ಶಿಕ್ಷಣ ನೀಡಲು ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಶಕ್ತಿ ಯೋಜನೆ ಮಾದರಿಯಲ್ಲಿ ಸರ್ಕಾರ ಗ್ರಾಪಂ ಮಟ್ಟದಲ್ಲಿ ಎರಡು ಬಸ್‌ಗಳ ಸೌಲಭ್ಯ ನೀಡಿದರೆ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ತಳಿಹಳ್ಳ ಶಾಲೆ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪರಮೇಶ್ವರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಪೂರ್ಣೇಶ್, ತಳಿಹಳ್ಳ ಗ್ರಾಪಂ ಉಪಾಧ್ಯಕ್ಷ ಅರುಣ್‌ಕುಮಾರ್, ಗ್ರಾಪಂ ಸದಸ್ಯರಾದ ಚೇತನ್, ಶಿಕ್ಷಣ ಸಂಯೋಜಕ ವೀರೇಶ್ ಕೌಲಗಿ ಮತ್ತಿತರರಿದ್ದರು.