ಬಸವಕಲ್ಯಾಣದಲ್ಲಿ ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕ್ರೀಡಾಕೂಟವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ತಹಸೀಲ್ದಾರ್ ದತ್ತಾತ್ರೇಯ ಗಾದಾ, ರಾಜು ಡಿ.ಬಣಕಾರ, ಅಲಿಸಾಬ್, ಮನೋಜಕುಮಾರ ಕಾಂಬಳೆ, ಶಿವಶರಣಪ್ಪ ಸಜ್ಜನಶೆಟ್ಟಿ, ಶಿವಕುಮಾರ, ಸುರೇಶ ಶಾಖಾ, ರಾಜಕುಮಾರ ಲಾಡೆ, ಸುರೇಶ (ಕಾರ್ಗಿಲ್), ಅನುಸುಯಾಬಾಯಿ, ಸುನೀತಾ ಇತರರಿದ್ದರು. 
ಜಿಲ್ಲೆ

ನಿಜವಾದ ಶ್ರೀಮಂತರೇ ಪೌರಕಾರ್ಮಿಕರು

ಬಸವಕಲ್ಯಾಣ: ಕಾಯಕವೇ ಕೈಲಾಸ ಎಂದು ಸಾರಿದ ನೆಲ ಕಲ್ಯಾಣ. ಕಾಯಕದಲ್ಲಿ ಶ್ರೇಷ್ಠ-ಕನಿಷ್ಠ ಇಲ್ಲವೇ ಇಲ್ಲ. ಎಲ್ಲವೂ ಶ್ರೇಷ್ಠ. ಸ್ವಚ್ಛ, ಸುಂದರ ಕಲ್ಯಾಣದ ಕನಸು ಸಾಕಾರ ಮಾಡುವ ಪೌರಕಾರ್ಮಿಕರು ಕಾಯಕ ಯೋಗಿಗಳು, ತಾವುಗಳೇ ನಿಜವಾದ ಶ್ರೀಮಂತರು ಎಂದು ಶಾಸಕ ಶರಣು ಸಲಗರ ಬಣ್ಣಿಸಿದರು.

ನಗರಸಭೆಯಿಂದ ನಗರದ ರಥ ಮೈದಾನದಲ್ಲಿ ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಬೆಳಕು ಹರಿವ ಮುನ್ನ, ಜನ ನಿದ್ದೆಯಲ್ಲಿ ಇರುವಾಗಲೇ ಕೆಲಸ ಆರಂಭಿಸಿ, ಶೃದ್ದೆಯಿಂದ ಶ್ರಮ ವಹಿಸಿ ಕೆಲಸ ಮಾಡುವ ನಿಮಗೆ ಸಮಯಕ್ಕೆ ನಿದ್ದೆ, ನೆಮ್ಮದಿ ಇದೆ. ಹೀಗಾಗಿ ಕಾಯಕ ಜೀವಿಗಳಾಗಿರುವ ನೀವೇ ಶ್ರೀಮಂತರು ಎಂದು ಹೇಳಿದರು.

ಗಾಂಧೀಜಿ ಅವರ ನಂತರ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಿದವರು ಪ್ರಧಾನಿ ಮೋದಿ ಅವರು. ಸ್ವಚ್ಛ ಭಾರತದ ಕನಸು ಸಾಕಾವಾಗಬೇಕಾದರೆ ಇದಕ್ಕೆ ಪೌರ ಕಾರ್ಮಿಕರೇ ಕಾರಣಿಕರ್ತರು. ಸ್ವಂತ ಪ್ರಧಾನಿ ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಾರೆ. ಕಾರ್ಮಿಕರಿಗೆ ಅತ್ಯಂತ ಗೌರ ಕೊಡುತ್ತಾರೆ. ಇನ್ನು ನಮ್ಮೆಲ್ಲರದು ಯಾವ ಲೆಕ್ಕ ಎಂದು ಪೌರ ಕಾರ್ಮಿಕರ ಸೇವೆಯ ಮಹತ್ವ ಮತ್ತು ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಹಸೀಲ್ದಾರ್ ದತ್ತತ್ರೇಯ ಗಾದಾ ಮಾತನಾಡಿ, ಸ್ವಚ್ಛತೆಯ ಮೂಲಕ ಉತ್ತಮ ಪರಿಸರ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೊಡುಗೆ ದೊಡ್ಡದು. ನಗರದವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯ ಕಾಪಾಡುವ ತಾವುಗಳು ತಮ್ಮ ಆಯೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ರಾಜು.ಡಿ.ಬಣಕಾರ ಮಾತನಾಡಿ, ದಿನಾಚರಣೆ ನಿಮಿತ್ತ ಎರಡು ದಿನಗಳ ಕ್ರೀಡಾಕೂಟ ಆಯೋಜಿಸಲಾದ್ದು, ಅವರಿಗೆ ಸುರಕ್ಷಾ ಪರಿಕರ ಮತ್ತು ವಿಶೇಷ ಭತ್ಯೆ ನೀಡಲಾಗಿದೆ ಎಂದರು.

ಸಿಪಿಐ ಅಲಿಸಾಬ ಮಾತನಾಡಿದರು. ನಗರಸಭೆ ಸದಸ್ಯರಾದ ಸಗೀರೋದ್ದಿನ್, ಮೋಯಿನ್‌ಸಾಬ್, ಪರಿಸರ ಅಭಿಯಂತರ ಮನೋಜಕುಮಾರ ಕಾಂಬಳೆ, ನಿವೃತ್ತ ಎಇಇ ಶಿವಶರಣಪ್ಪ ಸಜ್ಜನಶೆಟ್ಟಿ, ಸಮುದಾಯ ಸಂಘಟಕ ಶಿವಕುಮಾರ, ಪೌರಕಾರ್ಮಿಕರ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಲಾಡೆ ಪ್ರಮುಖರಿದ್ದರು. ಶಿವಲೀಲಾ ಮಲ್ಲಿಕಾರ್ಜುನ ಸ್ವಾಗತಿಸಿದರು. ಶರಣು ದೇಸಾಯಿ ನಿರೂಪಣೆ ಮಾಡಿದರು.

ತಪ್ಪು ಮಾಡಿದರೆ ಬಿಡಲ್ಲ: ನಗರಸಭೆಯ ಪೌರಾಯುಕ್ತರ ರಾಜು ಬಣಕಾರ ಮತ್ತು ಸಿಪಿಐ ಅಲಿಸಾಬ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ ಎಂದು ಶಾಸಕ ಶರಣು ಸಲಗರ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದ ಸ್ಥಳವನ್ನು ಕೆಲವರು ಅತಿಕ್ರಮಣ ಮಾಡುತ್ತಿದ್ದಾರೆ. ಇವರಿಗೆ ಕೆಲವರ ಸಹಕಾರವಿದೆ. ತಪ್ಪು ಮಾಡಿದವರನ್ನು ನಾನು ಬಿಡುವದಿಲ್ಲ. ಕಟ್ಟಡ ನಿರ್ಮಿಸಿದರೂ ನೆಲ ಸಮ ಮಾಡಿಸುತ್ತೇನೆ. ತಪ್ಪು ಮಾಡಿದವರು ತಿದ್ದಿಕೊಳ್ಳಬೇಕು. ಇಲ್ಲವಾದರೇ ಸಮಯ ತಿರುಗಿದರೆ ಜೇಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಳೆಯಲ್ಲಿಯೇ ಆಟವಾಡಿದ ಕಾರ್ಮಿಕರು: ನಗರದ ರಥ ಮೈದಾನದಲ್ಲಿ ಕ್ರೀಡಾಕೂಟ ಆರಂಭಿಸುತ್ತಿದ್ದAತೆ ಮಳೆ ಅರಂಭವಾಯಿತು. ಮಳೆಯಲ್ಲಿಯೇ ಮ್ಯೂಜಿಕಲ್ ಚೇರ್ ಸೇರಿ ಇತರ ಕ್ರೀಡಾಕೂಟದಲ್ಲಿ ಪೌರ ಕಾರ್ಮಿಕರು ಉತ್ಸಾಹದಿಂದ ಆಟವಾಡಿ ಸಂಭ್ರಮಿಸಿದರು. ಪೌರಾಯುಕ್ತ ರಾಜು ಬಣಕಾರ ಹಾಗೂ ಸಿಪಿಐ ಅಲಿಸಾಬ್ ಕಾರ್ಮಿಕರನ್ನು ಪ್ರೋತ್ಸಾಹಿಸಿದರು.