ಮಂಡ್ಯ: ಪ್ರವಾಸ ಸ್ಥಳಗಳನ್ನು ನೋಡುವುದರ ಜತೆಗೆ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕೆ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಬಸರಾಳು ಗ್ರಾಮದ ಕೆಪಿಎಸ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಸರ್ಕಾರಿ ಪದವಿ ಪೂರ್ವ ಕಾಲೇಜು(ಕೆಪಿಎಸ್) ವತಿಯಿಂದ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕಬಡ್ಡಿ ಮತ್ತು ವಾಲಿಬಾಲ್ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಮಕ್ಕಳ ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಕ್ಕೂ ನನ್ನ ವೈಯಕ್ತಿಕ ಖರ್ಚಿನಿಂದಲೇ ಕಳುಹಿಸಿಕೊಡುತ್ತೇನೆ. ಅಗತ್ಯವಿದ್ದರೆ ವಿಮಾನದಲ್ಲಿಯೂ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುತ್ತೇನೆ. ಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸಬೇಕು. ಕಬಡ್ಡಿ ಮತ್ತು ವಾಲಿಬಾಲ್ ಆಟದಲ್ಲಿ ಜಯ ಗಳಿಸಿದ ತಂಡಗಳಿಗೆ ಮಹಿಳಾ ಮತ್ತು ಪುರುಷರ ಪ್ರತ್ಯೇಕವಾಗಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಜಿಲ್ಲೆಯ ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡು ಉತ್ತೇಜನ ನೀಡಿದರೆ ಅವರ ಕಲಿಕೆಗೆ ಪೂರಕವಾಗಿ ಮಾಹಿತಿ ಸಿಗುತ್ತದೆ. ಶಿಕ್ಷಣ ಸಚಿವರು ರಾಜ್ಯದಲ್ಲಿನ ಪ್ರಮುಖವಾದ ಇತಿಹಾಸ ಸ್ಥಳಗಳು ಮತ್ತು ವಿಧಾನಸೌಧದಲ್ಲಿ ನಡೆಯುವ ಅಧಿವೇಶನ ನಡೆಯುವುದನ್ನು ವೀಕ್ಷಿಸಲು ಅನುವು ಮಾಡಿಕೊಡುವುದು. ಈ ಪ್ರವಾಸದಲ್ಲಿ ಇರಬೇಕು ಎಂದು ಮನವಿ ಮಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಟಿ.ಟಿ.ಶಂಕರೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಪ್ರಾಂಶುಪಾಲ ಎನ್.ಎಸ್.ಲಿಂಗರಾಜು, ಉಪಪ್ರಾಂಶುಪಾಲೆ ಅನಿತಾ, ಮುಖ್ಯ ಶಿಕ್ಷಕ ಮೋಹನ್ ಕುಮಾರ್, ಗ್ರಾ.ಪಂ ಅಧ್ಯಕ್ಷ ಸಂಪೂರ್ಣಯ್ಯ, ಉಪಾಧ್ಯಕ್ಷೆ ಗೀತಾ ಕೃಷ್ಣ, ಸದಸ್ಯರಾದ ಸುನೀಲ್‌ಕುಮಾರ್, ದಿನೇಶ್, ಪದ್ಮಾ, ಶಾಂಭವಿ, ನಿವೇದಿತಾ ಭಾಗವಹಿಸಿದ್ದರು.