ಪಾಂಡವಪುರ: ಪೌರಕಾರ್ಮಿಕರ ದಿನಾಚರಣೆ-2025 ಹಿನ್ನೆಲೆಯಲ್ಲಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಪೌರಕಾರ್ಮಿಕರಿಗಾಗಿ ಬುಧವಾರ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಪುರಸಭೆ ಪೌರರ್ಮಿಕರು, ನೀರು ಸರಬರಾಜು ಸಹಾಯಕರು, ಪುರಸಭೆ ಚುನಾಯಿತ ಸದಸ್ಯರು, ನಾಮಿನಿ ಸದಸ್ಯರು ಹಾಗೂ ಕಚೇರಿ ಸಿಬ್ಬಂದಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡರು. ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್, ಬಕೆಟ್ ಇನ್ ದಿ ಬಾಲ್, ನೂರು ಮೀಟರ್ ಓಟದ ಸ್ಪರ್ಧೆ, ಲೆಮನ್ ಇನ್ ಸ್ಪೂನ್, ವಾಲಿಬಾಲ್ ಹಾಗೂ ಪುರುಷರಿಗೆ ಗುಂಡು ಎಸೆತ, ನೂರು ಮೀಟರ್ ಓಟದ ಸ್ಪರ್ಧೆ ಮತ್ತು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಮಾತನಾಡಿ, ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ ವರ್ಷಪೂರ್ತಿ ಬಿಡುವಿಲ್ಲದೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಪಟ್ಟಣ ಸ್ವಚ್ಛತೆ ಮತ್ತು ನೀರು ಸರಬರಾಜು ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ಸದಾ ಒತ್ತಡದಲ್ಲಿ ಅವರು ಕೆಲಸ ನಿರ್ವಹಿಸುತ್ತಾರೆ. ಹೀಗಾಗಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಚೇರಿ ಸಿಬ್ಬಂದಿಯನ್ನು ಒಳಗೊಂಡಂತೆ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರಿಂದ ಕಾರ್ಮಿಕರ ಮನಸ್ಸು ಕೊಂಚ ಹಗುರವಾಗುತ್ತದೆ. ಜತೆಗೆ ಕ್ರೀಡೆ ಮಾನಸಿಕ ಬಲವನ್ನು ವೃದ್ಧಿಗೊಳಿಸುತ್ತದೆ. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮುಂದಿನ ದಿನಗಳಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಕ್ರೀಡಾಕೂಟವನ್ನು ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಉದ್ಘಾಟಿಸಿ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಚಂದ್ರು, ಶಿವಕುಮಾರ್, ಇಂಜಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ಸಿಬ್ಬಂದಿ ಕೃಷ್ಣ, ಲಕ್ಷ್ಮೀನಾರಾಯಣ, ಇಂದ್ರಮ್ಮ, ಧನಲಕ್ಷ್ಮೀ ಮಧು, ಪೌರಕಾರ್ಮಿಕರಾದ ಶಿವಕುಮಾರ್, ಈಶ್ವರ ಇತರರು ಇದ್ದರು.