ಜಿಲ್ಲೆ

ಸಮಾಜ ಸಂಘಟನೆಗೆ ಕ್ರೀಡಾಕೂಟ ಆಯೋಜನೆ ಸಹಕಾರಿ: ಗೀತಾ ಗಿರೀಶ್

ಮಡಿಕೇರಿ: ಸಮಾಜ ಸಂಘಟನೆಗೆ ಕ್ರೀಡಾಕೂಟ ಸಹಕಾರಿ ಎಂದು ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷೆ ಗೀತಾ ಗಿರೀಶ್ ಹೇಳಿದರು.


ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ ೨ನೇ ವರ್ಷದ ವಿಪ್ರ ಕ್ರೀಡಾಕೂಟದ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಬ್ರಾಹ್ಮಣ ಸಮಾಜದ ಬಾಂಧವರಿಗೆ ಭಾನುವಾರ ನಡೆದ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಸಭಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಕ್ರೀಡಾಕೂಟ ಆಯೋಜನೆ ಮೂಲಕ ಸಮಾಜದವರು ಒಂದು ವೇದಿಕೆಯಡಿಯಲ್ಲಿ ಸೇರುವುದರಿಂದ ಸಮಾಜದ ಸಂಘಟನೆಗೆ ಸಹಕಾರಿಯಾಗುತ್ತದೆ. ಕಳೆದ ಬಾರಿ ಕ್ರೀಡಾಕೂಟದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಈ ಬಾರಿ ಹೊಸ ಪ್ರಯೋಗ ಮೂಲಕ ಬ್ಯಾಡ್ಮಿಂಟನ್ ಹಾಗೂ ಟಿ.ಟಿ ಪಂದ್ಯಾವಳಿ ಆಯೋಜನೆಗೊಂಡಿದ್ದು, ಇದಕ್ಕೂ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮುಂದಿನ ಬಾರಿ ಇನ್ನೂ ಹೆಚ್ಚಿನ ಕ್ರೀಡೆಗಳನ್ನು ಕ್ರೀಡಾಕೂಟದ ಅಂಗವಾಗಿ ಆಯೋಜನೆಗೊಳಿಸುವ ಚಿಂತನೆ ಇದೆ. ದಿನನಿತ್ಯದ ಒತ್ತಡದ ಜೀವನದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಿದ್ದು ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.


ಈ ಸಂದರ್ಭ ಸಮಾಜದ ಪ್ರಮುಖರಾದ ಶಿವಶಂಕರ್, ಮಂಜುನಾಥ್, ಸವಿತಾ ಭಟ್, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಭರತೇಶ್ ಖಂಡಿಗೆ ಇದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಮಾಜದ ಬಾಂಧವರು ಕ್ರೀಡಾಕೂಟದಲ್ಲಿ ಪಾಲ್ಗೊಂಡರು.


ಬ್ಯಾಡ್ಮಿಂಟನ್ ವಿಜೇತರ ವಿವರ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಡಿಕೇರಿಯ ಈಶ್ವರಿ ಉದಯಶಂಕರ್ ವಿಜೇತರಾಗಿದ್ದು, ಮಡಿಕೇರಿಯ ಸೌಮ್ಯ ಸಂತೋಷ್ ಭಟ್‌ರವರು ರನ್ನರ್ ಪ್ರಶಸ್ತಿ ಪಡೆದುಕೊಂಡರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮಡಿಕೇರಿಯ ಸುಮನ ಶ್ರೀ ಹರಿ-ಸೌಮ್ಯ ಸಂತೋಷ್ ಭಟ್ ಜೋಡಿ ಪ್ರಥಮ ಹಾಗೂ ಮಡಿಕೇರಿಯ ಸುಧಾ ಶಂಕರ್ ಪ್ರಸಾದ್-ಈಶ್ವರಿ ಉದಯಶಂಕರ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀನಿವಾಸ್ ಕುಶಾಲನಗರ ಪ್ರಥಮ ಹಾಗೂ ಮಡಿಕೇರಿಯ ಶಶಿಕಾಂತ್‌ರವರು ದ್ವಿತೀಯ ಸ್ಥಾನ ಗಳಿಸಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಕುಶಾಲನಗರದ ಅಚಲ್ ಮಯ್ಯ ಹಾಗೂ ಪ್ರಶಾಂತ್ ಮಯ್ಯ ಜೋಡಿ ಪ್ರಥಮ, ಮಡಿಕೇರಿಯ ಡಾ.ರಾಘವನ್ ಹಾಗೂ ವೀರಾಜಪೇಟೆಯ ಮಂಜುನಾಥ್ ಜೋಡಿ ದ್ವಿತೀಯ ಸ್ಥಾನಗಳಿಸಿತು.


ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಅವಿನಾಶ್ ಕೃಷ್ಣ ಪ್ರಥಮ ಹಾಗೂ ಶಿಶಿರ್ ದ್ವಿತೀಯ ಸ್ಥಾನ ಪಡೆದುಕೊಂಡರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಸುಮೇಧ ಪ್ರಥಮ, ಆಯುಕ್ತ ದ್ವಿತೀಯ ಸ್ಥಾನಗಳಿಸಿದರು. ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಡಿಕೇರಿಯ ಜಿ.ಡಿ.ಹರಿಶಂಕರ್ ಪ್ರಥಮ ಹಾಗೂ ಕುಶಾಲನಗರದ ಕೆ.ಪಿ.ಸುಬ್ರಮಣ್ಯ ದ್ವಿತೀಯ ಸ್ಥಾನಗಳಿಸಿದರು.


ಕ್ರೀಡಾಕೂಟದ ಅಂಗವಾಗಿ ಜ.೧೧ ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಮೇಲಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭ ಜ.೨೫ ರಂದು ಮಡಿಕೇರಿ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು.