ಜಿಲ್ಲೆ

ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿನಿಯರು: ಮಹಿಳಾ ದಿನಾಚರಣೆ ಅಂಗವಾಗಿ ಆಯೋಜನೆ

ಮಂಡ್ಯ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ವಿದ್ಯಾರ್ಥಿನಿಯರಿಗೆ ಸಕತ್ ಮನರಂಜನೆ ನೀಡಿತು.

ಅನನ್ಯ ಹಾರ್ಟ್ ಸಂಸ್ಥೆ ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಮಡಿಕೆ ಹೊಡೆಯುವುದು, ಮ್ಯೂಸಿಕಲ್ ಛೇರ್, ಕೆರೆ ದಡ, ಲಂಡನ್ ಟೂರ್ ಸೇರಿದಂತೆ ಹಲವು ಆಟ ಆಯೋಜಿಸಲಾಗಿತ್ತು. ಪ್ರಾದೇಶಿಕ ಕಚೇರಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಪೈಪೋಟಿಗೆ ಬಿದ್ದವರಂತೆ ಆಟವಾಡಿದರು.

ಬಳಿಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದ ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷರೂ ಆದ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ದೇಶದ ಅಭಿವೃದ್ಧಿಗೆ ಮಹಿಳೆಯರು ಪಾತ್ರ ದೊಡ್ಡದು. ಅಂತೆಯೇ ಮಹಿಳೆಯರು ಸ್ವಾವಲಂಬಿ ಜತೆಗೆ ಆರೋಗ್ಯವಂತರಾದರೆ ನಿಜಕ್ಕೂ ಸ್ವಶಕ್ತಿಕರಣ ಯಶಸ್ವಿಯಾದಂತೆ. ಆದಾಗ್ಯೂ ದಿನವೂ ಹಾಗೂ ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯ ಹೋರಾಟ ಮುಂದುವರೆದಿದೆ ಎಂದರು.

ಮುಕ್ತ ವಿವಿಯ ಪ್ರಾದೇಶಿಕ ನಿರ್ದೇಶಕಿ ಮಿಲನಾ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಮಹಿಳೆಯರು ಮಹಿಳೆಯರಿಗಾಗಿ ಒತ್ತಾಸೆಯಾಗಿ ನಿಲ್ಲಬೇಕು. ಅಂತೆಯೇ ಮಹಿಳೆಯರ ಏಳಿಗೆಗಾಗಿ ಕೇವಲ ಮಹಿಳೆಯರಷ್ಟೇ ಶ್ರಮಿಸಿದರೆ ಸಾಕಾಗುವುದಿಲ್ಲ. ಸಮಾಜದಲ್ಲಿ ಸಮಾನತೆ ಸಾಧಿಸಲು ಅಭಿವೃದ್ಧಿಯತ್ತ ಸಾಗಲು ಪುರುಷರ ಸಹಭಾಗಿತ್ವವವೂ ಸಹ ಅಗತ್ಯ ಎಂದು ಹೇಳಿದರು.

ಪ್ರಾದೇಶಿಕ ಕೇಂದ್ರದ ಅಧೀಕ್ಷಕ ವೆಂಕಟರಾಮು, ಪ್ರಥಮ ದರ್ಜೆ ಸಹಾಯಕ ಹನುಮೇಗೌಡ ಇತರರಿದ್ದರು.