ಜಿಲ್ಲೆ

ಕ್ರೀಡೆ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯುತ್ತದೆ; ಶಿವಾನಂದ ತಗಡೂರು ಹೇಳಿಕೆ

ಹಾಸನ: ಕ್ರೀಡಾ ಮನೋಭಾವ ಇರುವವರು ಸಾಧಕರಾಗಬಲ್ಲರು. ದೇಶಕ್ಕೆ ಸತ್ಪ್ರಜೆಯಾಗಬಲ್ಲರು. ಜೀವನದಲ್ಲಿ ಯಶಸ್ಸು ಗಳಿಸುವರು. ಏಕೆಂದರೆ ಸೋಲು- ಗೆಲುವು ಒಂದು ನಾಣ್ಯದ ಎರಡು ಮುಖವಿದ್ದಂತೆ. ಕ್ರೀಡಾಪಟುಗಳು ಮಾತ್ರ ಅದನ್ನು ಸಮನಾಗಿ ಸ್ವೀಕರಿಸುವರು. ಧರ್ಮ, ಜಾತಿ, ಭೇದ ಇಲ್ಲದೆ ಇರುವುದು ಕ್ರೀಡೆಯಲ್ಲಿ ಮಾತ್ರ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಹಾಸನದ ರಾಜೀವ್ ಪಾಲಿಟೆಕ್ನಿಕ್ ಆವರಣದಲ್ಲಿ ರಾಜೀವ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ.ವಿ. ರಾಜೀವ್ ಅವರ ಸ್ಮರಣಾರ್ಥವಾಗಿ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಬಾಲಕರ ವಾಲಿಬಾಲ್ ಪಂದ್ಯಾವಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿ ‘ರಾಜೀವ್ ವಾರಿಯರ್ಸ್ ಕಪ್ 2025’ ಕಾರ್ಯಕ್ರಮವನ್ನು ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಡುತ್ತಾರೆ. ಅವರ ತ್ಯಾಗಗಳಿಗೆ ಮಕ್ಕಳು ಸಾರ್ಥಕತೆಯನ್ನು ನೀಡಬೇಕು. ಆ ದೃಷ್ಟಿಯಲ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ವ್ಯಕ್ತಿತ್ವವನ್ನು ದೃಢಶಕ್ತಿ ಮತ್ತು ದೃಢ ಸಂಕಲ್ಪದಿಂದ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಣ್ಣ ಪಂದ್ಯವೂ ಕ್ರೀಡಾ ಸ್ಫೂರ್ತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಲವು ಕನಸುಗಳನ್ನು ಹೊತ್ತ ಕ್ರೀಡಾಪಟುಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಬದಲಾವಣೆ ಎನ್ನುವುದು ನಮ್ಮ ಮನಸ್ಸಿನಿಂದ ಬರಬೇಕು. ಆಗಲೇ ಕ್ರೀಡಾಕೂಟ ಆಯೋಜನೆಯ ಉದ್ದೇಶ ಸಾರ್ಥಕವಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಈಜು ಚಾಂಪಿಯನ್ ಹಾಗೂ ಹಾಸನದ ಆಯುಷ್ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಕೆ ರಾಮ್ ಪ್ರವೀಣ್ ಅವರು ಮಾತನಾಡಿ, ದೇಹಕ್ಕೆ ಸ್ಥಿರತೆಯನ್ನು ನೀಡಲು ವ್ಯಾಯಾಮ ಸರ್ವಶ್ರೇಷ್ಠ ಮಾರ್ಗ. ಸತತ ಪ್ರಯತ್ನ, ಪ್ರತಿನಿತ್ಯ ಅಭ್ಯಾಸದಿಂದ ಕ್ರೀಡೆಯಲ್ಲಾಗಲಿ, ವಿದ್ಯೆಯಲ್ಲಾಗಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಪಾಲಿಟೆಕ್ನಿಕ್ ಬಾಲಕರ ವಾಲಿಬಾಲ್ ಪಂದ್ಯಾವಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿ ಹಾಸನದ ರಾಜೀವ್ ಕಾಲೇಜಿನಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ 15 ಜಿಲ್ಲೆಗಳಿಂದ 30 ತಂಡಗಳು ಭಾಗವಹಿಸಿದ್ದವು.

ಸಮಾರಂಭದಲ್ಲಿ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಎನ್. ರತ್ನಾ, ಸಂಸ್ಥೆಯ ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್, ರಾಜೀವ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಎಂ.ಆರ್. ಶಂಕರೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್ ಮತ್ತು ಉಪನಿರ್ದೇಶಕ ಗಣೇಶ್ ಉಪಸ್ಥಿತರಿದ್ದರು.