ಕೃಷಿ ಕಾಲೇಜ್ ಮೈದಾನದಲ್ಲಿ ಶ್ರೀರಾಮ ಆಯೋಧ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಡಿ.ಎಸ್.ಅರುಣ್ ಉದ್ಘಾಟಿಸಿದರು. ಎನ್.ಎಂ.ಶ್ರೀಧರ್, ಎನ್.ಎಂ.ಲೀಲಾಬಾಯಿ, ಸಾರಥಿ ಶಿವಾನಂದ್, ದಿನೇಶ್ ದಾಸ್ ವೈಷ್ಣವ್, ಓಂ ಪ್ರಕಾಶ್, ಜಿ.ವಿ.ಪಾಂಡುರಂಗಪ್ಪ ಇದ್ದರು. 
ಜಿಲ್ಲೆ

ಕ್ರೀಡೆಯಿಂದ ಭಾವೈಕ್ಯತೆ, ಭ್ರಾತೃತ್ವ ವೃದ್ಧಿ

ನವೀನ ಬಿ.ಎಂ

ಶಿವಮೊಗ್ಗ: ಯಾವುದೇ ವ್ಯಕ್ತಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢನಾಗುವುದಲ್ಲದೆ, ದೈನಂದಿನ ಕಾರ್ಯಗಳನ್ನು ಉತ್ಸಾಹದಿಂದ ಮಾಡಲು ಸಹಾಯವಾಗುತ್ತದೆ. ಅಲ್ಲದೆ ಕ್ರೀಡೆಯಿಂದ ರಾಷ್ಟ್ರೀಯ ಭಾವೈಕ್ಯತೆ, ಭ್ರಾತೃತ್ವ ಬೆಳೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ನಗರದ ಕೃಷಿ ಕಾಲೇಜು ಮೈದಾನದಲ್ಲಿ ಗಾಂಧಿಬಜಾರ್‌ನ ಹನುಮಾನ್ ಬಾಯ್ಸ ತಂಡ ಮತ್ತು ಪರೋಪಕಾರಂ ಕುಟುಂಬದ ಸಹಯೋಗದಲ್ಲಿ ಶ್ರೀರಾಮ ಅಯೋಧ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯ ಮೂಲಕ ಕ್ರಿಕೆಟ್ ಪ್ರೇಮಿಗಳು ಮತ್ತು ಯುವಜನರನ್ನು ಭಾರತೀಯತೆ ಹಾಗೂ ರಾಷ್ಟ್ರಪ್ರೇಮದ ಮುಖ್ಯವಾಹಿನಿಗೆ ಸೆಳೆಯಲು ಅನುಕೂಲವಾಗುತ್ತದೆ. ಅಲ್ಲದೆ ಯುವಜನರು ಅನಾರೋಗ್ಯಕರ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಗಟ್ಟಬಹುದು ಎಂದರು.
ಶ್ರೀರಾಮನ ಜೀವನ, ಆದರ್ಶ ಗುಣಗಳು ವಿಚಾರ ಮಾಡಿದಷ್ಟು ಉದಾತ್ತವಾಗಿವೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಶ್ರೀರಾಮನ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಆಗ ಮಾನವೀಯತೆಯ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ದೇಶದಲ್ಲಿ 2.80 ಕೋಟಿ ಶೌಚಾಲಯಗಳು ನಿರ್ಮಾಣಗೊಂಡಿವೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪರೋಪಕಾರಂ ಕುಟಂಬವು ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಗಳನ್ನು ನಡೆಸುವ ಮೂಲಕ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರೋಪಕಾರಂ ಕುಟುಂಬದ ಕಟ್ಟಾಳು ಎನ್.ಎಂ.ಶ್ರೀಧರ್, ಎನ್.ಎಂ.ಲೀಲಾಬಾಯಿ, ಸಾರಥಿ ಶಿವಾನಂದ್, ದಿನೇಶ್ ದಾಸ್ ವೈಷ್ಣವ್, ಓಂ ಪ್ರಕಾಶ್, ಜಿ.ವಿ.ಪಾಂಡುರಂಗಪ್ಪ, ಕಾರ್ಪೆಂಟರ್ ಕುಮಾರ್, ಎನ್.ಎಂ.ರಾಘವೇಂದ್ರ, ನರಪತ್ ಪಟೇಲ್, ಗೀತಾ ಶಿವಾನಂದ್, ವಿಜಯ್ ಕಾರ್ತಿಕ್, ವೈಶಾಖ, ಕಾವೇರಿ, ಗೌತಮ್ ಇದ್ದರು.