ಜಿಲ್ಲೆ

ಒಲಿಂಪಿಕ್ಸ್‌ನಲ್ಲಿ ಭಾರತದ ಹಿನ್ನಡೆಗೆ ಕ್ರೀಡಾ ಸಂಸ್ಕೃತಿ ಕೊರತೆ ಕಾರಣ : ನಿವೃತ್ತ ಪ್ರಾಂಶುಪಾಲ ಡಾ.ಬಿ. ಸದಾಶಿವ ಭಟ್

ಮೈಸೂರು: ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಪದಕ ಪಡೆಯಲು ಸಾಧ್ಯವಾಗದೆ ಇರಲು ನಮ್ಮಲ್ಲಿ ಕ್ರೀಡಾ ಸಂಸ್ಕೃತಿ ಇಲ್ಲದೆ ಇರುವುದೇ ಪ್ರಮುಖ ಕಾರಣ ಎಂದು ಬಾಸುದೇವ ಸೋಮಾನಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ. ಸದಾಶಿವ ಭಟ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳ ಅಲುಮ್ನಿ ಅಸೋಷಿಯೇಷನ್ ವತಿಯಿಂದ ನಗರದ ಓವಲ್ ಮೈದಾನ ಆವರಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಬಾಲಕ ಮತ್ತು ಬಾಲಕಿಯರ ರಸ್ತೆ ಓಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶಕ್ಕೆ ಕೇವಲ 6 ಪದಕಗಳು ಮಾತ್ರ ದೊರೆತ್ತಿದೆ. ಬಹುಶ ಎಷ್ಟೇ ವರ್ಷ ಕಳೆದರೂ ಇದೇ ಫಲಿತಾಂಶ ಮರುಕಳಿಸುವ ಸಾಧ್ಯತೆ ಇದೆ. ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಾಕಷ್ಟು ಅನುದಾನ ನೀಡುತ್ತಿದೆ. ಆದರೂ ನಮ್ಮಲ್ಲಿ ಕ್ರೀಡಾ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ. ಇದಕ್ಕೆ ಕ್ರೀಡಾ ಸಂಸ್ಕೃತಿ ಇಲ್ಲದೆ ಇರುವುದು ಕಾರಣ ವಾಗಿದ್ದು, ಕ್ರೀಡಾ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ಕ್ರೀಡಾಪಟು ಪ್ರತಿನಿತ್ಯ ಓಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ರೀಡೆಗೂ ಓಟ ಎಂಬುದು ಬಹಳ ಮುಖ್ಯವಾದದ್ದು. ಸಾಮಾನ್ಯವಾಗಿ ವಿದ್ಯಾರ್ಥಿಗಳು 10ನೇ ತರಗತಿವರೆಗೆ ಆಟ, ಓಟದಲ್ಲಿ ತೊಡಗುತ್ತಾರೆ, ಆ ನಂತರ ನಿಲ್ಲಿಸಿ ಬಿಡುತ್ತಾರೆ. ಇದು ನಾವು ಮಾಡುವ ದೊಡ್ಡ ತಪ್ಪು. ವಿದ್ಯಾರ್ಥಿಗಳು ಯಾವುದೇ ಕ್ರೀಡೆಯಲ್ಲಾದರೂ ತಮ್ಮನ್ನು ತೊಡಗಿಸಿಕೊಳ್ಳಿ. ಆದರೆ, ಪ್ರತಿನಿತ್ಯ 5 ಕಿ.ಮೀ. ಓಡುವುದನ್ನು ಮಾತ್ರ ನಿಲ್ಲಿಸಬೇಡಿ ಎಂದು ಕಿವಿ ಮಾತು ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ವೆಂಕಟೇಶ್ ಮಾತನಾಡಿ, ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸರ್ಕಾರ ಉದ್ಯೋಗದಲ್ಲಿ ಶೇ.2 ರಷ್ಟು ಮೀಸಲಾತಿ ನೀಡಿದೆ. ಇತ್ತೀಚೆಗೆ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡು ಪದಕ ವಿಜೇತರಾದ 6 ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಡಿಎಸ್‌ಪಿ ಹುದ್ದೆಯನ್ನು ನೇರವಾಗಿ ನೀಡಿದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪಾಲಕರು ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.

ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ. ಕೃಷ್ಣ ಮಾತನಾಡಿ, ಕ್ರೀಡಾಪಟುಗಳು ಶಿಸ್ತು ರೂಢಿಸಿಕೊಳ್ಳಬೇಕು. ಶಿಸ್ತು ಇಲ್ಲದೆ ಇದ್ದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಓದಿನ ಜತೆಗೆ ಯಾವುದಾದರು ಒಂದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಈಜುಪಟು ಡಾ.ಆನ್ಯಾ ಸೈನಿ ಮಂಜ್ರೇಕರ್, ರಾಷ್ಟ್ರೀಯ ಕಬಡ್ಡಿ ಆಟಗಾರ ಸಿ.ಚನ್ನಯ್ಯ, ಓಟದ ಸ್ಪರ್ಧೆಯ ನಿರ್ದೇಶಕ ಬಿ. ಶ್ರೀಕಾಂತ್, ಗೌರವ ಕಾರ್ಯದರ್ಶಿ ಎಂ.ಜೆ. ಚರಣ್ ಇದ್ದರು.