ಕಾಲ್ಸ್ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಬಾಚೇಟ್ಟಿರ ಗೌರಮ್ಮ ನಂಜಪ್ಪ ಸಲಹೆ
ನಾಪೋಕ್ಲು: ಕ್ರೀಡೆ ಶಿಕ್ಷಣದಲ್ಲಿ ಒಂದು ಪ್ರಮುಖ ಅಂಗವಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳ ಬೇಕೆಂದು ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಬಾಚೇಟ್ಟಿರ ಗೌರಮ್ಮ ನಂಜಪ್ಪ ಹೇಳಿದರು.
ಇಲ್ಲಿಗೆ ಸಮೀಪದ ಮೂರ್ನಾಡು ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮೂರ್ನಾಡು ವಿದ್ಯಾ ಸಂಸ್ಥೆಯ ವಾರ್ಷಿಕ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆ ಹಾಗೂ ಶೈಕ್ಷಣಿಕ ಚಟುವಟಿಕೆಗಳೆರಡರಲ್ಲೂ ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಚೌರಿರ ಜಗತ್ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಅದರ ಸದುಪಯೋಗವನ್ನು ಪಡೆದು ಜೀವನದಲ್ಲಿ ಯಶಸ್ಸನ್ನು ಕಾಣಬೇಕೆಂದರು.
ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮಾಸ್ ಡ್ರಿಲ್, ಡಂಬಲ್ಸ್, ಪಿರಮಿಡ್ ಹಾಗೂ ಜುಂಬ ನೃತ್ಯಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು. ಕ್ರೀಡಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿ, ಶಿಕ್ಷಕರಿಗೆ ನಡೆದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬಹುಮಾನವನ್ನು ವಿತರಿಸಲಾಯಿತು.
ನಿವೃತ್ತ ಶಿಕ್ಷಕಿ ಬಾಚೇಟ್ಟಿರ ಕಮಲು ಮುದ್ದಯ್ಯ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ನಂದೇಟಿರ ರಾಜ ಮಾದಪ್ಪ, ಕಾರ್ಯದರ್ಶಿಗಳಾದ ವೇಣು ಅಪ್ಪಣ್ಣ, ಖಜಾಂಚಿ ವಿ.ಎ.ಯತೀಶ್, ನಿರ್ದೇಶಕರಾದ ಪುದಿಯೋಕ್ಕಡ ಹರೀಶ್ ದೇವಯ್ಯ, ಪಾಣತ್ತಲೆ ಹರೀಶ್, ಈರಮಂಡ ಸೋಮಣ್ಣನ, ಸಲೀನ ಜಗತ್ ಹಾಗೂ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
--------
19-ಎನ್ ಪಿ ಕೆ-2.
ಮೂರ್ನಾಡು ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಚೇಟ್ಟಿರ ಗೌರಮ್ಮ ನಂಜಪ್ಪ ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿದರು.
-----------