ಮಂಗಳೂರು ವಲಯಮಟ್ಟದ ವಾಲಿಬಾಲ್ ಟೂರ್ನಿಯನ್ನು ಡಾ.ರಾಧಕೃಷ್ಣ ಎಸ್.ಐತಾಳ್ ಉದ್ಘಾಟಿಸಿದರು.  
ಜಿಲ್ಲೆ

ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ಶಿರ್ವ: ದೇಹದ ಸದೃಢತೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಶ್ರೀಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ರಾಧಕೃಷ್ಣ ಎಸ್.ಐತಾಳ್ ಹೇಳಿದರು.

ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2025ನೇ ಸಾಲಿನ ಮಂಗಳೂರು ವಲಯಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಉಪಪ್ರಾಂಶುಪಾಲ ಡಾ.ಗಣೇಶ ಐತಾಳ್, ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪೌಲ್ ಸೂರಜ್ ಹಾಗೂ ಶುಭಶ್ರೀ ತಂಡಗಳನ್ನು ಪರಿಚಯಿಸಿದರು. ಆದಿತ್ಯ ದೇಶಪಾಂಡೆ ಪ್ರಾರ್ಥಿಸಿದರು. ಸೌಂದರ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಲಯದ 14 ತಂಡಗಳು ಭಾಗವಹಿಸಿದ್ದವು.