ನಿಡಗುಂದಿ: ಶಿಕ್ಷಣ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಜಿವಿವಿಎಸ್ ಸಮೂಹ ಸಂಸ್ಥೆ ಚೇರ್ಮನ್ ಸಿದ್ದಣ್ಣ ನಾಗಠಾಣ ಹೇಳಿದರು.
ಪಟ್ಟಣದ ಜಿವಿವಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಬಿಇಡಿ ಪ್ರಶಿಕ್ಷಣಾರ್ಥಿಗಳ ಸಾಂಸ್ಕೃತಿಕ ಹಾಗೂ ವಿದ್ಯಾರ್ಥಿ ಒಕ್ಕೂಟದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಪಾರವಾದ ಕನಸುಗಳೊಂದಿಗೆ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಮತ್ತು ನಿರ್ದಿಷ್ಠ ಗುರಿಯೊಂದಿಗೆ ಸತತ ಪ್ರಯತ್ನಶೀಲರಾದರೆ ಮಾತ್ರ ಸಾಧನೆ ಸಾಧ್ಯ ಎಂದರು.
ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸತ್ಯಜೀತ್ ಪಾಟೀಲ ಮಾತನಾಡಿ, ಸಾಧನೆಗೆ ಅಂಗವೈಕಲ್ಯ, ಬಡತನ ಅಡ್ಡಿಯಲ್ಲ, ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು. ಸಾಧಕರೆಲ್ಲ ಹಲವಾರು ಅಡೆತಡೆಗಳನ್ನು ಮೀರಿ ಮಾಡಿರುವ ಸಾಧನೆ ನಮಗೆಲ್ಲ ಸ್ಫೂರ್ತಿಯಾಗಬೇಕು. ವಿದ್ಯಾರ್ಥಿ ಒಕ್ಕೂಟ, ಕಾಲೇಜು ಹಂತದಲ್ಲಿ ಚಟುವಟಿಕೆಯನ್ನು ಅತ್ಯಂತ ಜವಾಬ್ದಾರಿಯಿಂದ ನಡೆಸಿಕೊಂಡು ಒಕ್ಕೂಟ ಹಾಗೂ ಶಿಕ್ಷಣ ಸಂಸ್ಥೆ ಕೀರ್ತಿ ಹೆಚ್ಚಿಸಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಐ.ಸಿ. ಪಟ್ಟಣಶೆಟ್ಟಿ, ನಿರ್ದೇಶಕ ದಯಾನಂದ ಹೆಬ್ಬಾಳ, ಜಿವಿವಿಎಸ್ ಸಂಸ್ಥೆ ನಿರ್ದೇಶಕ ಡಾ. ಅನುಪ್ ನಾಗಠಾಣ, ಕಾರ್ಯದರ್ಶಿ ಬಸವರಾಜ ಮುಚ್ಚಂಡಿ, ಪ್ರಾಚಾರ್ಯೆ ಸವಿತಾ ದೇಸಾಯಿ, ಆರ್.ಎಸ್. ಅಂಗಡಿ, ಅಂಬಕ್ಕ ಗೋನಾಳ, ಎಸ್.ಸಿ. ಬೀಳಗಿ, ಡಿ.ಕೆ. ತಾಂಬೇಕರ, ಪಿ.ಎಸ್. ಕಲ್ಲಗೊಂಡ, ವೆಂಕಟೇಶ ಪಾಟೀಲ ಸೇರಿ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.