ವಿಕ್ರಮ ನಾಡಿಗೇರ ಧಾರವಾಡ ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದ ಕೋರ್ಟ್ ವೃತ್ತದ ಬಳಿ ನಿರ್ಮಿಸಿರುವ ಸುಸಜ್ಜಿತ ಕ್ರೀಡಾ ಸಂಕೀರ್ಣ (ಸ್ಪೋರ್ಟ್ಸ್ ಕಾಂಪ್ಲೆಕ್ಸ್) ಇನ್ನು ಕೆಲ ತಿಂಗಳಲ್ಲೇ ಉದ್ಘಾಟನೆಗೊಳ್ಳಲಿದ್ದು, ಕ್ರೀಡಾಪಟುಗಳ ಉಪಯೋಗಕ್ಕೆ ಮುಕ್ತವಾಗಲಿದೆ. ಎನ್ಎಂಡಿಸಿ ಮತ್ತು ಒಎನ್ಜಿಸಿ ಕಂಪನಿಗಳ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ಮೂಲಕ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಸುಮಾರು 1.6 ಎಕರೆ ವಿಶಾಲವಾದ ಜಾಗದಲ್ಲಿ ಸಂಕೀರ್ಣ ನಿರ್ಮಾಣವಾಗಿದೆ. ದೆಹಲಿಯ ಐಐಟಿ ಹಾಗೂ ಪ್ರತಿಷ್ಠಿತ ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆಆರ್ಕಿಟೆಕ್ಟ್ ತಾಂತ್ರಿಕ ಸಲಹೆ ಈ ಯೋಜನೆಗೆ ಇರುವುದು ವಿಶೇಷ. ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಸ್ಥಾಪಿಸುವ ಕನಸಿನೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಕೀರ್ಣ ನಿರ್ಮಾಣಕ್ಕೆ 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಈ ಬೃಹತ್ ಯೋಜನೆ ಯಶಸ್ಸಿಗೆ ಶಾಸಕ ಅರವಿಂದ ಬೆಲ್ಲದ ಸಹ ಸಾಕಷ್ಟು ಶ್ರಮಿಸಿದ್ದಾರೆ. ಸ್ಥಳಿಯ ಕ್ರೀಡಾಪಟುಗಳು, ತರಬೇತುದಾರರೊಂದಿಗೆ ಸಮಾಲೋಚನೆ ನಡೆಸಿ ಆಯಾ ಕ್ರೀಡೆಗಳಿಗೆ ತಕ್ಕಂತೆ ಸಂಕೀರ್ಣದ ವಿನ್ಯಾಸ ರೂಪಿಸಲಾಗಿದೆ. ಸಂಕೀರ್ಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಫೂಲ್, ಒಳಾಂಗಣ ಕ್ರೀಡೆಗಳಿಗೆ ವಿಶಾಲ ಜಾಗ ಸೇರಿ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಹುತೇಕ ಕಟ್ಟಡ ಸಂಪೂರ್ಣ ಹೊಸ ತಂತ್ರಜ್ಞಾನದೊಂದಿಗೆ ಸ್ಟೀಲ್ ರಚನೆ (ಸ್ಟ್ರಕ್ಚರ್)ಯೊಂದಿಗೆ ನಿರ್ಮಾಣವಾಗಿದೆ. ಕ್ರೀಡೆಗಳನ್ನು ವೀಸಲು ಸುಸಜ್ಜಿತ ಗ್ಯಾಲರಿ, ಕ್ರೀಡಾಪಟುಗಳಿಗೆ ಪ್ರತ್ಯೇಕ ಕೊಠಡಿಗಳು ಸೇರಿ ಅನೇಕ ಸೌಲಭ್ಯ ಕಲ್ಪಿಸಲಾಗಿದೆ. ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಹಳೇ ಕಟ್ಟಡ ನೆಮಲಸಮಗೊಳಿಸಿ ಕಾಮಗಾರಿ ಆರಂಭಿಸುವ ಹಂತದಲ್ಲಿ ಕರೊನಾದಿಂದ ಕೆಲಕಾಲ ಸ್ಥಗಿತವಾಗಿತ್ತು. ನಂತರ ಕಾಮಗಾರಿ ಆರಂಭವಾದಾಗ ಅನುದಾನ ಕೊರತೆ ಸೇರಿ ಇನ್ನೂ ಅನೇಕ ಅಡೆತಡೆಗಳು ಕಾಮಗಾರಿ ವಿಳಂಬಕ್ಕೆ ಕಾರಣವಾಗಿವೆ. ಹಂತ ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ಬರೋಬ್ಬರಿ 6 ವರ್ಷಕ್ಕೆ ಸಿದ್ಧವಾದ ಸುಸಜ್ಜಿತ ಸಂಕೀರ್ಣ 2-3 ತಿಂಗಳಲ್ಲಿ ಉದ್ಘಾಟನೆಗೊಳ್ಳುವುದು ಕ್ರೀಡಾಪಟುಗಳಲ್ಲಿ ಸಂತಸ ಮೂಡಿಸಿದೆ. ಕ್ರೀಡಾ ಸಂಕೀರ್ಣದಲ್ಲಿನ ಸೌಲಭ್ಯ: ಹೆಸರಿಗೆ ತಕ್ಕಂತೆ ಬಹು ಉಪಯೊಗಿ ಕ್ರೀಡಾ ಸಂಕೀರ್ಣ ಇದಾಗಿದೆ. ಜಿ+3 ಮಹಡಿಗಳಲ್ಲಿ ಸಂಕೀರ್ಣ ನಿರ್ಮಾಣವಾಗಲಿದೆ. ನೆಲಮಹಡಿಯಲ್ಲಿ ಕಾರ್, ಬೈಕ್ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದ್ದರೆ, ಉಳಿದ ಕಡೆಗಳಲ್ಲಿ ಕ್ಯಾಂಟೀನ್, ಕ್ರೀಡಾ ಸಾಮಗ್ರಿಗಳ ಮಳಿಗೆಗಳು, ವೀಕ್ಷಕರ ಗ್ಯಾಲರಿ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಈಜುಕೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್, ಜುಡೋ, ಮಹಿಳೆ-ಪುರುಷರಿಗೆ ಪ್ರತ್ಯೇಕ ಜಿಮ್, ತರಬೇತುದಾರರು, ವೈದ್ಯರಿಗೆ ಕೊಠಡಿ ಸೇರಿ ಇನ್ನೂ ಅನೇಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇದೇ ಕಾರಣಕ್ಕೆ ನಗರದ ಬಹುತೇಕ ಕ್ರೀಡಾಪಟುಗಳು ಈ ಸಂಕೀರ್ಣ ಉದ್ಘಾಟನೆಗೆ ಕಾದು ಕುಳಿತಿದ್ದಾರೆ.
* ಅರವಿಂದ ಬೆಲ್ಲದ, ಶಾಸಕಕ್ರೀಡಾಪಟುಗಳ ಅನುಕೂಲಕ್ಕೆ ತಕ್ಕಂತೆ ನಿರ್ಮಾಣವಾಗಿರುವ ಕ್ರೀಡಾ ಸಂಕೀರ್ಣದ ಕಾಮಗಾರಿ ಬಹುತೇಕ ಸಂರ್ಪೂಣವಾಗಿದೆ. ಇನ್ನು ಕೆಲ ತಿಂಗಳಲ್ಲೇ ಉದ್ಘಾಟನೆಯಾಗಲಿದೆ.