ಎಚ್.ಡಿ.ಕೋಟೆ: ಕ್ರೀಡೆಯನ್ನು ಸವಾಲಾಗಿ ಸ್ವೀಕರಿಸದೆ ಒಂದು ಆಟವಾಗಿ ತೆಗೆದುಕೊಂಡು ಉತ್ತಮ ಆರೋಗ್ಯಕರ ಸಮಾಜಕ್ಕೆ ಅಡಿಪಾಯವಾಗಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಸಿ.ಎನ್ ರಾಜು ಅಭಿಪ್ರಾಯ ಪಟ್ಟರು.
ಪಟ್ಟಣದ ಸೇಂಟ್ ಮೇರಿಸ್ ಪ್ರೌಢಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹದಿನಾಲ್ಕು ವರ್ಷದ ಮೇಲ್ಪಟ್ಟ ಹಾಗೂ ಹದಿನೇಳು ವರ್ಷದೊಳಗಿನ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಂದು ಆಟಕ್ಕೂ ವಿಶಿಷ್ಟವಾದ ಉದ್ದೇಶ ಮತ್ತು ಮೌಲ್ಯವಿದೆ. ನಾವು ಆಡುವ ಪ್ರತಿಯೊಂದು ಕ್ರೀಡೆ ಮತ್ತು ಆಟವು ನಮಗೆ ಶಿಸ್ತು ಕಲಿಸುತ್ತದೆ. ಕ್ರೀಡೆಗಳು ನಮಗೆ ಅಮೂಲ್ಯವಾದ ಪಾಠ ಕಲಿಸುತ್ತವೆ, ಕಷ್ಟಗಳು ಹೊರತಾಗಿಯೂ, ನಾವು ಕ್ರೀಡಾಪಟುಗಳಾಗಿ ಅನುಭವಿಸಬಹುದು. ಆದ್ದರಿಂದ ನಾವು ನಮ್ಮ ಜೀವನದಲ್ಲಿ ಆಟಗಳು ಮತ್ತು ಕ್ರೀಡೆಗಳ ಮೌಲ್ಯ ಮತ್ತು ಮಹತ್ವವನ್ನು ಗ್ರಹಿಸಬೇಕು ಎಂದು ತಿಳಿಸಿದರು.
ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ವಿಭಾಗ, ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಜಿಲ್ಲೆಯ ಕೀರ್ತಿ ತರಬೇಕು ಎಂದು ತಿಳಿಸಿದರು.
ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಕ್ರೀಡಾಪಟುಗಳು ಯಾವುದೇ ಗೊಂದಲ ಮಾಡಿಕೊಳ್ಳದೆ ಉತ್ತಮ ಪ್ರದರ್ಶನ ನೀಡಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಬೇಕು, ದೈಹಿಕ ಶಿಕ್ಷಕರು ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಉತ್ತಮ ಕ್ರೀಡಾಕೂಟ ನಡೆಸಿ ಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ವಿವಿಧ ತಾಲೂಕಿನ ಬಾಲಕರ ವಿಭಾಗದಿಂದ 18 ಹಾಗೂ ಬಾಲಕಿಯರ ತಂಡದಿಂದ 18 ಒಟ್ಟು 36 ತಂಡಗಳು ಭಾಗವಹಿಸಿದ್ದವು.
ಪುರಸಭಾ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಧು ಕುಮಾರ್, ಸೇಂಟ್ ಜೋಸೆಫ್ ಶಾಲೆಯ ವ್ಯವಸ್ಥಾಪಕ ಡಾ.ಖರ್ನಾಡ್ ಪ್ರಕಾಶ್ ಖಾರ್ನಿಸ್, ದೈಹಿಕ ಶಿಕ್ಷಣ ಪರೀವಿಕ್ಷಕ ನಾಗೇಂದ್ರಯ್ಯ ಇದ್ದರು.