ಜಿಲ್ಲೆ

ದೈಹಿಕ ಆರೋಗ್ಯ ವೃದ್ಧಿಗಾಗಿ ಕ್ರೀಡೆ ಅಗತ್ಯ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಅಭಿಮತ

ಮೈಸೂರು: ಹೆಚ್ಚಿನ ಕಾರ್ಯಕ್ಷಮತೆ, ದಕ್ಷತೆ, ಮನೋಬಲ, ನೈತಿಕ ಸ್ಥೈರ್ಯ ಹಾಗೂ ದೈಹಿಕ ಆರೋಗ್ಯ ವೃದ್ಧಿಗಾಗಿ ಕ್ರೀಡೆ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.
ಜಿಲ್ಲಾ ಪೊಲೀಸ್ ವತಿಯಿಂದ ನಗರದ ಜ್ಯೋತಿನಗರ ಡಿಎಆರ್ ಮೈದಾನದಲ್ಲಿ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸದ ಜತೆಗೆ ಪ್ರತಿನಿತ್ಯ ಯಾವುದಾದರೊಂದು ಕ್ರೀಡೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡರೆ ಉತ್ತಮ. ಇದರಿಂದ ಕರ್ತವ್ಯದಲ್ಲಿ ಹೆಚ್ಚಿನ ಕಾರ್ಯಕ್ಷಮತೆ, ದಕ್ಷತೆ, ಮನೋಬಲ, ನೈತಿಕ ಸ್ಥೈರ್ಯ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ದೇಶದ ಗಡಿ ಕಾಯುವ ಮೂಲಕ ಯೋಧರು ನಮಗೆ ಹೊರಗಿನಿಂದ ರಕ್ಷಣೆ ನೀಡಿದರೆ, ಪೊಲೀಸರು ದೇಶದೊಳಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಬೆಂಬಲವಾಗಿ ನಿಂತಿದ್ದಾರೆ. ಹಗಲು, ರಾತ್ರಿ ಎನ್ನದೆ ಕಾರ್ಯನಿರ್ವಹಿಸುವ ಮೂಲಕ ಜನರಿಗೆ ನೇರವಾಗಿ ರಕ್ಷಣೆ ನೀಡುತ್ತಿದ್ದಾರೆ. ಇದರಿಂದ ಪೊಲೀಸರ ಬಗ್ಗೆ ಸಮಾಜದಲ್ಲಿ ವಿಶೇಷ ಗೌರವವಿದೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ರೀನಾ ಜಾರ್ಜ್ ಮಾತನಾಡಿ, ಒತ್ತಡದ ನಡುವೆಯೂ ಪೊಲೀಸರು ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸರಿಗೆ ಸ್ವಂತ ಬದುಕು ಎಂಬುದು ಕಷ್ಟಸಾಧ್ಯ. ಒತ್ತಡದ ನಡುವೆಯೂ ಪೊಲೀಸರು ಮಾನಸಿಕ ಹಾಗೂ ದೈಹಿಕ ಆರೋಗ್ಯದತ್ತ ಗಮನಹರಿಸಬೇಕು. ಕ್ರೀಡೆ, ವ್ಯಾಯಾಮ, ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಪರ್ಧಿಗಳು ಕ್ರೀಡಾ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಆಕರ್ಷಕ ಪಥಸಂಚಲನ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ಡಾ.ನಂದಿನಿ ಇತರರು ಇದ್ದರು.