ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬ ವಿದ್ಯಾರ್ಥಿ ಯಾವುದೇ ಒಂದು ಕ್ರೀಡೆಯಲ್ಲಾದರೂ ನೈಪುಣ್ಯತೆ ಹೊಂದಿರಬೇಕು. ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ ಎಂದು ಎಆರ್ಸಿ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಅರುಣ ಚರಂತಿಮಠ ಹೇಳಿದರು.
ನಗರದ ಕಾಮನಕಟ್ಟಿ ಬಳಿಯ ಚರಂತಿಮಠ ಗಾರ್ಡನ್ ಬಡಾವಣೆಯ ಲೀಲಾವತಿ ಚರ೦ತಿಮಠ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಖೇಲೋ ಇಂಡಿಯಾ ಆಂದೋಲನ ರಾಷ್ಟ್ರವ್ಯಾಪಿ ಹಬ್ಬಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಹೊಸ ಹೊಸ ಕ್ರೀಡಾ ಉಪಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ. ಬರುವ ದಿನಗಳಲ್ಲಿ ಭಾರತ ಎಲ್ಲ ಹಂತಗಳ ಕ್ರೀಡಾ ಸ್ಪರ್ಧೆಗಳಲ್ಲಿ ಹೆಚ್ಚಿನ ಚಿನ್ನದ ಪದಕಗಳನ್ನು ಗೆಲ್ಲುವಂತಾಗಲಿ ಎಂದರು.
ಮೇಜರ್ ಧ್ಯಾನ್ಚಂದ್ ಹಾಕಿಯಲ್ಲಿ ವಿವಿಧ ಪ್ರಶಸ್ತಿಗಳನ್ನು ತಂದುಕೊಟ್ಟರು. ಒಲಿಂಪಿಕ್ಸ್ನಲ್ಲಿ ಚಿನ್ನವನ್ನು ಸಂಪಾದಿಸಿದ ಭಾರತೀಯ ಹಾಕಿ ತಂಡದಲ್ಲಿ ಅವರ ಶ್ರಮ ಮರೆಯುವಂತಿಲ್ಲ. 22 ವರ್ಷಗಳ ತಮ್ಮ ಕ್ರೀಡಾ ಬದುಕಿನಲ್ಲಿ 400ಕ್ಕೂ ಹೆಚ್ಚು ಗೋಲುಗಳನ್ನು ಹೊಡೆದು ದಾಖಲೆ ನಿರ್ಮಿಸಿದ್ದಾರೆ ಎಂದರು.
ಶಾಲೆ ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ತರಲು ಹಾಗೂ ಸೋಲು ಗೆಲುವುಗಳನ್ನು ಸಮರ್ಥವಾಗಿ ಎದುರಿಸಲು ಕ್ರೀಡಾ ಚಟುವಟಿಕೆಗಳ ಆಯೋಜನೆ ಸಹಕಾರಿ. ಶಾಲೆ ವಿದ್ಯಾರ್ಥಿಗಳು ವಿಭಿನ್ನ ಕ್ರೀಡಾ ಸಾಧನೆ ಮಾಡುತ್ತಿರುವುದು ಶಾಲೆಯ ಗೌರವವನ್ನು ಹೆಚ್ಚಿಸಿದೆ ಎಂದರು.
ಶಾಲೆಯಲ್ಲಿ ಟೇಕ್ವಾಂಡೊ ಕಲೆ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆ ಪ್ರದರ್ಶಿಸಿದರು. ನಗರದ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಹಾಗೂ ಪಾಲಕರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.
ಮಂಜುನಾಥ ಮುಂದಿನಮನಿ, ಸಂಜೀವ ಸಾವಕ್ಕನವರ, ಇತರರು ಇದ್ದರು.