ಜಿಲ್ಲೆ

ಕ್ರೀಡೆ-ಧರ್ಮ ನಾಣ್ಯದ ಎರಡು ಮುಖಗಳಿದ್ದಂತೆ

ಸೋಮವಾರಪೇಟೆ: ಕ್ರೀಡೆ ಮತ್ತು ಧರ್ಮ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರೋತ್ಸವ ಹಾಗೂ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧರ್ಮದ ಮೂಲಕ ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕ್ರೀಡೆಯನ್ನು ಬಳಸಿಕೊಳ್ಳಬೇಕಿದೆ ಎಂದರು.

ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಕೊಡಗಿನ ಜನರನ್ನು ಕ್ರೀಡಾ ಕ್ಷೇತ್ರದಿಂದ ಗುರುತಿಸುತ್ತಾರೆ. ಕೀಡೆಯ ಮೂಲಕ ಬಹುದೊಡ್ಡ ಸಾಧನೆ ಮಾಡಿದ ಕೀಡಾಪ್ರತಿಭೆಗಳು ಕೊಡಗಿನವರಾಗಿದ್ದಾರೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳಿದ್ದು, ಹಂತ-ಹಂತವಾಗಿ ಅವುಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಜಾತ್ರೋತ್ಸವ ಮತ್ತು ಕ್ರೀಡಾ ಸಮಿತಿ ವತಿಯಿಂದ ಬೃಹತ್ ಕ್ರೀಡಾಕೂಟ ಆಯೋಜಿಸಿರುವುದು ಗ್ರಾಮೀಣ ಜನರ ಸಂಭ್ರಮಕ್ಕೆ ಕಾರಣವಾಗಿದೆ. ಒಂದಷ್ಟು ಮನೋರಂಜನೆ ಜನರಿಗೆ ಸಿಗುತ್ತಿದೆ. ಪ್ರತಿಭಾ ಪ್ರದರ್ಶನಕ್ಕೂ ವೇದಿಕೆಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ. ಗುರುಪ್ರಸಾದ್, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘಧ ಅಧ್ಯಕ್ಷ ಎಸ್.ಬಿ.ಭರತ್‌ಕುಮಾರ್, ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಂಡಲ ಅಧ್ಯಕ್ಷ ಗೌತಮ್‌ಗೌಡ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಎಚ್.ಆರ್.ಮುತ್ತಣ್ಣ, ಕಾಫಿ ಬೆಳೆಗಾರ ಸಿ.ಎನ್.ಆಶೋಕ್ ಕುಮಾರ್ ಇದ್ದರು.