ಜಿಲ್ಲೆ

ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾಜ ಬೆಸೆಯುವ ಶಕ್ತಿಯಿದೆ

ಮಡಿಕೇರಿ:

ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾಜ ಬಾಂಧವರನ್ನು ಬೆಸೆಯುವ ಬಹಳ ದೊಡ್ಡ ಶಕ್ತಿಯಿದೆ, ಈ ಸಾಮರ್ಥ್ಯವನ್ನು ಮಲಯಾಳಿ ಸಮಾಜದವರು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂ ಘೋಷಂ ಮತ್ತು ಓಣಂ ಸದ್ಯ ಅಂಗವಾಗಿ ಭಾನುವಾರ ನಡೆದ ಕ್ರೀಡಾಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಕೊಡಗಿನಲ್ಲಿ ನೆಲಸಿರುವ ಹಿಂದೂ ಮಲಯಾಳಿ ಸಮುದಾಯದವರು ವ್ಯಾಪಾರ ವಿಸ್ತರಣೆಯ ಜತೆಗೇ ಸ್ಥಳೀಯರ ಜತೆ ಗೆಳೆತನ, ಮಾನವೀಯತೆ ಗುಣದ ವಿಸ್ತರಣೆಗೂ ಕಾರಣರಾಗಿದ್ದಾರೆ, ಹೀಗಾಗಿಯೇ ಮಲಯಾಳಿ ಸಮಾಜಬಾಂಧವರು ಸ್ಥಳೀಯರೊಂದಿಗೆ ಅನ್ಯೋನ್ಯತೆಯಿಂದ ಬದುಕು ಕಂಡುಕೊಳ್ಳುವAತಾಗಿದೆ.

ಸಮುದಾಯದ ಒಗ್ಗಟ್ಟಿನಲ್ಲಿ ಮುಖ್ಯ ಪಾತ್ರ ವಹಿಸುವ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಿಂದೂ ಮಲಯಾಳಿ ಸಮಾಜದ ಪ್ರಮುಖರು ಆದ್ಯತೆ ನೀಡುವ ಮೂಲಕ ತಮ್ಮ ಸಂಘವನ್ನು ಬಲಿಷ್ಟವಾಗಿಸಿರುವುದು ಮೆಚ್ಚುವಂಥ ಕಾರ್ಯ. ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭ, ಕೋವಿಡ್ ಲಾಕ್ ಡೌನ್ ಸಂದರ್ಭ ಮಲಯಾಳಿ ಸಂಘದ ಸದಸ್ಯರ ನೆರವಿನ ಕಾರ್ಯ ಸದಾ ಸ್ಮರಣೀಯ.

ಕೇರಳದ ಯುವಕನೋರ್ವ ಕುಶಾಲನಗರದಲ್ಲಿ ಮೃತಪಟ್ಟ ಸಂದರ್ಭ ಆತನ ತಾಯಿ ಕೇರಳದಲ್ಲಿ ಅಂತ್ಯಕ್ರಿಯೆ ಅಸಾಧ್ಯ ಎಂದು ತನ್ನ ದಯಾನೀಯತೆ ತೋಡಿಕೊಂಡಾಗ ಹಿಂದೂ ಮಲಯಾಳಿ ಸಂಘದವರೇ ಮನೆಯ ಸದಸ್ಯರಂತೆ ಅಂತ್ಯಕ್ರಿಯೆ ನಡೆಸುವ ಮೂಲಕ ಮಾನವೀಯತೆಯನ್ನು ಜೀವಂತವಾಗಿಸಿದ ಘಟನೆ ಎಲ್ಲಾ ಸಮಾಜದವರಿಗೂ ಮಾದರಿಯಾಗುವಂಥದ್ದು ಎಂದರು.

ಮಡಿಕೇರಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ವಿವಿಧತೆಯಲ್ಲಿ ಏಕತೆಗೆ ನಿದರ್ಶನದಂತೆ ಕೊಡಗಿನಲ್ಲಿ ಎಲ್ಲಾ ಸಮಾಜ ಬಾಂಧವರು ಒಗ್ಗಟ್ಟಿನಿಂದ ಜೀವಿಸಿದ್ದಾರೆ. ಹಿಂದೂ ಮಲಯಾಳಿ ಸಂಘದ 11 ಶಾಖೆಗಳು ಕೊಡಗಿನಲ್ಲಿರುವುದು ಕೂಡ ಸಂಘದ ಬಲವರ್ಧನೆಗೆ ಕಾರಣವಾಗಿದೆ. ದ್ವೇಷಾಸೂಯೆಗಳಿಲ್ಲದೇ ಸಮಾಜದಲ್ಲಿ ಎಲ್ಲರೂ ಮಾದರಿಯಾಗಿ ಜೀವಿಸೋಣ ಎಂದು ಹಾರೈಸಿದರು.

ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಕ್ರೀಡಾಕೂಟಗಳ ಮೂಲಕ ಸಮಾಜಭಾಂದವರು ಒಟ್ಟಿಗೆ ಸೇರಲು ಸೂಕ್ತ ವೇದಿಕೆಯಾಗಿದೆ ಎಂದರಲ್ಲದೇ ವೈನಾಡಿನಲ್ಲಿ ಸಂಭವಿಸಿದ ಪ್ರಕೃತ್ತಿ ವಿಕೋಪದ ಹಿನ್ನೆಲೆ ಈ ಬಾರಿ ಜಿಲ್ಲೆಯ ಅನೇಕ ಕಡೆ ಓಣಂ ಸಂಭ್ರಮವನ್ನು ಪ್ರತೀ ವರ್ಷದಂತೆ ಮಾಡಲಾಗಿಲ್ಲ. ಮೊಬೈಲ್‌ನಿಂದಾಗಿ ಇಂದಿನ ಸಮಾಜದಲ್ಲಿ ಸಂಬAಧಗಳೇ ನಶಿಸುತ್ತಿದೆ. ಬಂಧುಬಾAಧವರು ಮನೆಗಳಿಗೆ ತೆರಳುವ ಕ್ರಮವೇ ಮರೆಯಾಗುತ್ತಿದೆ. ಒಂದೇ ಮನೆಯಲ್ಲಿದ್ದುಕೊಂಡು ದೂರದೂರದಲ್ಲಿ ಕುಳಿತುಕೊಂಡು ಮೊಬೈಲ್ ಮೂಲಕ ಸಂವಹನ ಮಾಡುವ ವಿಚಿತ್ರ ಪರಿಸ್ಥಿತಿ ತಲೆದೋರಿದೆ ಎಂದರು.

ಓಣA ಆಚರಣಾ ಸಮಿತಿ ಅಧ್ಯಕ್ಷ ಸಂಚಾಲಕ ಟಿ.ಆರ್. ವಾಸುದೇವ್ ಮಾತನಾಡಿ ಓಣಂ ಘೋಷಂ, ಓಣಂ ಸದ್ಯದ ಮೂಲಕ ಹಿಂದೂ ಮಲಯಾಳಿ ಸಮಾಜದವರನ್ನು ಒಗ್ಗೂಡಿಸುವ ಕಾರ್ಯ ಈ ವರ್ಷವೂ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷ ಟಿ.ಕೆ ಸುಧೀರ್ ಮಾತನಾಡಿದರು. ಹಿಂದೂ ಮಲಯಾಳಿ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಕೆ.ವಿ. ಧರ್ಮೇಂದ್ರ, ನಿರ್ದೇಶಕ ವಿನೋದ್ ನಾಯರ್, ಸಂಘದ ಗೌರವಾಧ್ಯಕ್ಷ ಕೆ.ಎಸ್ .ರಮೇಶ್. ಹಿಮಾನಿ ವಿಜಯಕುಮಾರ್, ಅಂಜಲಿ ಅಶೋಕ್, ಹೆಚ್. ಪಿ. ಅಶೋಕ್ ಮತ್ತಿತರರು ಇದ್ದರು.
ಹಿಂದೂ ಮಲಯಾಳಿ ಸಂಘದ ಸದಸ್ಯರು, ಕುಟುಂಬಸ್ಥರಿಗೆ ಹಗ್ಗಜಗ್ಗಾಟ, ಕ್ರಿಕೆಟ್, ಆಟೋಟಗಳು ಸೇರಿದಂತೆ ವೈವಿಧ್ಯಮಯ ಸ್ಪರ್ಧೆ ಆಯೋಜಿಸಲಾಗಿತ್ತು.