ಮಂಡ್ಯ: ಒಮ್ಮೆ ತೆಗೆದುಕೊಳ್ಳುವ ಗಟ್ಟಿನಿರ್ಧಾರ ಬದುಕನ್ನು ಬದಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಾಧನೆ ಮಾಡುವ ಹಠದೊಂದಿಗೆ ಪ್ರಯತ್ನ ಮಾಡಿದರೆ ಗುರಿ ತಲುಪಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ಪಾಂಡವಪುರ ತಾಲೂಕು ಮೇಲುಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಇಂದೇ ಶಪಥ ಮಾಡಿದರೆ ಮುಂದೊಂದು ದಿನ ಇದೇ ಕಾಲೇಜಿಗೆ ಅಧಿಕಾರಿ ಅಥವಾ ಉನ್ನತ ಸಾಧನೆ ಮಾಡಿದ ವ್ಯಕ್ತಿಯಾಗಿ ಮುಖ್ಯಅತಿಥಿಯಾಗಿ ಬರಬಹುದು. ನಿಮ್ಮ ಜೀವನದಲ್ಲಿ ನಡೆದ ಯಾವುದೇ ಒಂದು ಸಣ್ಣ ಘಟನೆ, ಅವಮಾನ, ಬಡತನ ಬದುಕನ್ನು ಬದಲಾಯಿಸುತ್ತದೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಪಡೆಯಬೇಕು. ಈ ಮೂಲಕ ಯಶಸ್ಸಿನ ಶಿಖರವೇರಬೇಕು. ನಾನು ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಓದಬೇಕಾದರೆ ದಿನನಿತ್ಯ ಕಿಲೋಮೀಟರ್‌ಗಟ್ಟಲೆ ನಡೆಯಬೇಕಿತ್ತು. ಪುಸ್ತಕಕೊಳ್ಳಲು ಹಾಗೂ ಶುಲ್ಕ ಕಟ್ಟಲು ನಾನೇ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದೆ. ನಮ್ಮ ಮನೆಯಲ್ಲಿ ಬಡತನವಿದ್ದ ಕಾರಣ ಮನೆಯವನ್ನು ಹಣ ಕೇಳುತ್ತಿರಲಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಬಡತನ ಎಂಬುದು ಸಾಧನೆಯ ಮೆಟ್ಟಿಲುಗಳಾಗಬೇಕು, ಅದು ಶಾಪವಾಗಬಾರದು ಎಂದು ಕರೆ ನೀಡಿದ ಅವರು, ಕಾಲೇಜಿಗೆ ಮಂಜೂರಾಗಿರುವ 10 ಎಕರೆ ಭೂಮಿಯಲ್ಲಿ ಶೀಘ್ರವಾಗಿ ಮರಗಳನ್ನು ತೆರವು ಮಾಡಿ ಕ್ರೀಡಾಂಗಣ ನಿರ್ಮಾಣಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು
ಕಾಲೇಜಿನ ಪ್ರಾಂಶುಪಾಲ ಡಾ.ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎಂ.ಎಸ್.ಕೃಷ್ಣ, ಕ್ರೀಡಾ ಸಂಚಾಲಕ ಎನ್.ಕೆ.ವಿಜಯಕುಮಾರ್, ಸಾಂಸ್ಕೃತಿಕ ಸಂಚಾಲಕರಾದ ಡಿ.ಶಂಕರ್, ಕಾವ್ಯಾ, ಉಪನ್ಯಾಸಕರಾದ ಸಿ.ಪರಮೇಶ್ವರ, ಡಾ.ಪುಟ್ಟರಾಜು, ಯೋಗೇಶ್, ಮಹೇಶ್, ಪುನೀತ್‌ಕುಮಾರ್, ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಕದಲಗೆರೆ ಮಹೇಶ್, ಕುಳ್ಳ ಜವರಯ್ಯ ಇತರರಿದ್ದರು.