ಮಡಿಕೇರಿ:
ಮಡಿಕೇರಿಯ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಅಕ್ಷರಶಃ ಕೆಸರಿನ ಗದ್ದೆಯಾಗಿ ಪರಿವರ್ತನೆ ಆಗಿದೆ. ಕ್ರೀಡಾಭಿಮಾನಿಗಳ ವಿರೋಧದ ಮಧ್ಯೆಯೂ ದಸರಾ ದಿನ ವಾಹನ ನಿಲುಗಡೆಗೆ ಅವಕಾಶ ಕೊಟ್ಟಿದ್ದ ಪರಿಣಾಮ ಮೈದಾನದ ಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿ ಆಟವಾಡುವುದು ಇರಲಿ ವಾಕಿಂಗ್ ಕೂಡ ಮಾಡಲು ಸಾಧ್ಯ ಆಗzಂಥ ವಾತಾವರಣ ನಿರ್ಮಾಣ ಆಗಿದೆ ಎಂದು ಕ್ರೀಡಾಭಿಮಾನಿಗಳು ದೂರಿಕೊಂಡಿದ್ದಾರೆ.
ಕೊಡಗು ಎಂದಾಗ ವೀರ ಸೇನಾನಿಗಳ ಜತೆಗೆ ದೇಶ, ವಿದೇಶಗಳಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳು ನೆನಪಾಗುತ್ತಾರೆ. ಸ್ಥಳೀಯವಾಗಿ ಸುಸಜ್ಜಿತ ಕ್ರೀಡಾಂಗಣಗಳ ಕೊರತೆ ಮಧ್ಯೆಯೇ ಸಾಧನೆ ಮಾಡುವ ಕ್ರೀಡಾಪಟುಗಳ ಛಲ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇರುವ ಕ್ರೀಡಾಂಗಣವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕ್ರೀಡಾ ಜಿಲ್ಲೆ, ಕ್ರೀಡಾಪಟುಗಳ ತವರೂರು ಎಂದು ಕರೆಯಿಸಿಕೊಳ್ಳುವ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಇರುವ ಏಕೈಕ ಕ್ರೀಡಾಂಗಣ ಇದಾಗಿದ್ದು, ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಹೆಸರಿನೊಂದಿಗೆ ಗುರುತಿಸಿಕೊಂಡಿದೆ. ಆದರೆ ಇದೀಗ ಈ ಕ್ರೀಡಾಂಗಣ ಸಂಪೂರ್ಣ ಹಾಳಾಗಿದ್ದು, ಕೆಸರಿನ ಗದ್ದೆಯಾಗಿ ಮಾರ್ಪಟ್ಟಿದೆ. ಭತ್ತ ನಾಟಿ ಮಾಡಲು ಈ ಮೈದಾನ ಸೂಕ್ತವಾಗಿದ್ದು, ಉತ್ತಮ ಇಳುವರಿ ತೆಗೆಯಬಹುದು ಎನ್ನುವ ಕುಹಕದ ಮಾತುಗಳು ಕೇಳಿಬರುತ್ತಿದೆ. ಹೇಗೂ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶ ಇಳಿಮುಖವಾಗಿದೆ. ಹಾಗಾಗಿ ಈ ಮೈದಾನ ಭತ್ತ ಬೆಳೆಯಲು ಬಳಸಿಕೊಳ್ಳಬಹುದು ಎಂದು ವ್ಯಂಗ್ಯಭರಿತವಾಗಿ ಸಲಹೆಗಳನ್ನು ಕೊಡಲಾಗುತ್ತಿದೆ.
ಜಿಲ್ಲಾ ಕ್ರೀಡಾಂಗಣದ ಈ ದುಸ್ಥಿತಿಗೆ ಕಾರಣವಾಗಿದ್ದು ಮಡಿಕೇರಿ ದಸರಾ. ದಸರಾ ವೀಕ್ಷಣೆಗೆ ನಗರಕ್ಕೆ ಆಗಮಿಸಿದ ವಾಹನಗಳಿಗೆ ಪಾರ್ಕಿಂಗ್ ಅವಕಾಶ ನೀಡಿದ್ದ ಸ್ಥಳಗಳ ಪೈಕಿ ಜಿಲ್ಲಾ ಕ್ರೀಡಾಂಗಣವೂ ಒಂದು. ದಸರಾ ಶೋಭಾಯಾತ್ರೆ ದಿನ ರಾತ್ರಿ ಭಾರಿ ಸಂಖ್ಯೆಯಲ್ಲಿ ವಾಹನಗಳನ್ನು ಇಲ್ಲಿ ನಿಲುಗಡೆ ಮಾಡಿದ್ದರಿಂದ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಚೆನ್ನಾಗಿ ನೆನೆದಿದ್ದ ಮೈದಾನ ವಾಹನಗಳ ಓಡಾಟದಿಂದ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.
ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ಐತಿಹಾಸಿಕ ನಾಡ ಹಬ್ಬದ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಇಲ್ಲಿ ಅವಕಾಶ ಕೊಟ್ಟು ಈಗ ಕ್ರೀಡಾಪಟುಗಳು ಮತ್ತು ಹಾಗೂ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಮತ್ತು ನಿತ್ಯ ಅಭ್ಯಾಸ ನಿರತರಿಗೆ ಈಗ ಸೂಕ್ತ ಮೈದಾನವೇ ಇಲ್ಲದಂತಾಗಿದೆ. ಪ್ರತಿನಿತ್ಯ ಇಲ್ಲಿ ವಾಕಿಂಗ್ ಮಾಡುತ್ತಿದ್ದವರು ಕೂಡ ಮೈದಾನದ ದುಸ್ಥಿತಿ ನೋಡಿ ಸಂಬAಧಿಸಿದ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.
ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಕಳೆದ ವರ್ಷವೂ ಇಲ್ಲಿ ಇದೇ ರೀತಿಯ ವಾತಾವರಣ ನಿರ್ಮಾಣ ಆಗಿತ್ತು. ಆಗಲೂ ಕ್ರೀಡಾಪ್ರೇಮಿಗಳು ತೀವ್ರವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಮಳೆಯಿಂದ ನೆನೆದಿರುವ ಮೈದಾನದಲ್ಲಿ ವಾಹನಗಳು ಒಡಾಡಿದರೆ ಹಾಳಾಗುತ್ತದೆ ಎನ್ನುವ ವಿಷಯ ಗೊತ್ತಿದ್ದರೂ ಸ್ಥಳೀಯ ಅಧಿಕಾರಿಗಳು ವಾಹನ ನಿಲುಗಡೆಗೆ ಪದೇ ಪದೇ ಇದೇ ಮೈದಾನವನ್ನು ಶಿಫಾರಸ್ಸು ಮಾಡುವುದು ಯಾಕೆ ಎಂದು ಪ್ರಶ್ನಿಸುತ್ತಾರೆ ಕ್ರೀಡಾಪ್ರೇಮಿಗಳು.
ಕನ್ನಡರಾಜ್ಯೋತ್ಸವ, ಗಣ ರಾಜ್ಯೋತ್ಸವ ಸೇರಿದಂತೆ ರಾಷ್ಟಿçÃಯ ಹಬ್ಬಗಳನ್ನು ಇದೇ ಮೈದಾನದಲ್ಲಿ ಆಚರಿಸಲಾಗುತ್ತದೆ. ಮಳೆಗಾಲದ ಕೆಲವು ದಿನಗಳು ಹೊರತುಪಡಿಸಿ ವರ್ಷದ ಬಹುತೇಕ ಸಮಯ ಇಲ್ಲಿ ಒಂದಿಲ್ಲೊAದು ಕ್ರೀಡಾಕೂಡಗಳು ನಡೆಯುತ್ತಿರುತ್ತದೆ. ಪ್ರತಿ ವರ್ಷ ಸಮುದಾಯಗಳ ಮಧ್ಯೆ ನಡೆಯುವ ವಿವಿಧ ಕ್ರೀಡಾಕೂಟ, ಹಾಕಿ, ಕ್ರಿಕೆಟ್, ಸೇನೆ, ಪೊಲೀಸ್, ಅರಣ್ಯ, ಅಬಕಾರಿ ಇಲಾಖೆಗೆ ಸಿಬ್ಬಂದಿ ಆಯ್ಕೆ ಸಂದರ್ಭ ದೈಹಿಕ ಪರೀಕ್ಷೆ ನಡೆಸಲು ಕೂಡ ಇದೇ ಮೈದಾನ ಬಳಕೆ ಆಗುತ್ತದೆ. ಕ್ರೀಡೆ ಮಾತ್ರವಲ್ಲದೆ ಸಾಂಸ್ಕೃತಿಕ ಮಹತ್ವದ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ದಿನ ವಾಹನ ನಿಲುಗಡೆಗೆ ಅವಕಾಶ ಕೊಟ್ಟು ಗಬ್ಬೆಬ್ಬಿಸುವುದರಿಂದ ಮಹಾನ್ ಸೇನಾನಿ ಜ. ತಿಮ್ಮಯ್ಯ ಅವರಿಗೂ ಅವಮಾನ ಮಾಡಿದಂತಾಗುತ್ತದೆ ಎಂದು ಕ್ರೀಡಾಪ್ರೇಮಿಗಳು ನೋವು ತೋಡಿಕೊಂಡಿದ್ದಾರೆ.
ಇಲ್ಲಿ ಕ್ರೀಡಾಕೂಟ ಅಥವಾ ಸಾಂಸ್ಕೃತಿ ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದರೆ ಹಲವಾರು ಷರತ್ತುಗಳನ್ನು ಹಾಕಲಾಗುತ್ತದೆ. ದುಬಾರಿ ಮೈದಾನ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಆದರೆ ದಸರಾ ಸಂದರ್ಭದಲ್ಲಿ ವಾಹನ ನಿಲುಗಡೆ ಸಂದರ್ಭಈ ಷರತ್ತುಗಳೆಲ್ಲಾ ಏನಾದವು ? ಮೈದಾನ ಶುಲ್ಕ ಪಾವತಿ ಆಗಿದೆಯಾ? ಹಾಳಾಗಿರುವ ಜಿಲ್ಲಾ ಕ್ರೀಡಾಂಗಣವನ್ನು ದುರಸ್ಥಿಪಡಿಸಿಕೊಡುವವರು ಯಾರು ? ಎನ್ನುವ ಕ್ರೀಡಾಭಿಮಾನಿಗಳ ಪ್ರಶ್ನೆಗಳಿಗೆ ಎಲ್ಲೂ ಉತ್ತರ ಸಿಗುತ್ತಿಲ್ಲ.
ದಸರಾ ಸೇರಿದಂತೆ ಯಾವುದೇ ಸಂದರ್ಭದಲ್ಲೂ ವಾಹನಗಳ ನಿಲುಗಡೆಗೆ ಜಿಲ್ಲಾ ಕೇಂದ್ರ ಬಳಕೆ ಆಗುವುದು ಈ ವರ್ಷಕ್ಕೆ ಕೊನೆ ಆಗಬೇಕು. ಮುಂದಿನ ದಿನಗಳಲ್ಲಿ ಇಲ್ಲಿ ಯಾವುದೇ ಕಾರಣಕ್ಕೂ ವಾಹನ ನಿಲುಗಡೆಗೆ ಅವಕಾಶ ಕೊಡಬಾರದು. ವಾಹನಗಳ ಪ್ರವೇಶಕ್ಕೆ ಕೂಡ ಅನುಮತಿಸಬಾರದು. ಮೈದಾನವನ್ನು ಕೂಡಲೇ ದುರಸ್ಥಿಪಡಿಸಿ ದೈನಂದಿನ ಕ್ರೀಡಾ ಚಟುವಟಿಕೆಗಳಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿರುವ ಕ್ರೀಡಾಪ್ರೇಮಿಗಳು, ಕ್ರೀಡಾಕೂಟ ಮತ್ತು ಮೈದಾನಕ್ಕೆ ಹಾನಿಯಾಗದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಇಲ್ಲಿ ಅನುಮತಿ ನೀಡುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಯಿಂದ ಮೈದಾನಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಕ್ರೀಡಾ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದಲ್ಲಿ ಜಿಲ್ಲಾಧಿಕಾರಿ ಸ್ಪಂದಿಸಿ ವಾಹನ ನಿಲುಗಡೆಗೆ ಬೇರೆ ಸ್ಥಳವನ್ನು ಗುರುತಿಸುವ ಸಾಧ್ಯತೆ ಇತ್ತು. ಆದರೆ ಈ ಕೆಲಸ ಸಂಬAಧಿಸಿದ ಇಲಾಖೆಯಿಂದ ಆಗಲಿಲ್ಲ. ಇದರ ಪರಿಣಾಮ ಈಗ ಎದುರಿಸುವಂತೆ ಆಗಿದೆ. ಒಂದು ವೇಳೆ ಜಿಲ್ಲಾ ಕ್ರೀಡಂಗಣದಲ್ಲಿ ವಾಹನ ನಿಲುಗಡೆ ಅನಿವಾರ್ಯವೇ ಆಗಿದ್ದಲ್ಲಿ ವಾಹನ ನಿಲುಗಡೆ ಶುಲ್ಕ ವಿಧಿಸಿ ಆ ಹಣದಿಂದ ಮೈದಾನ ದುರಸ್ಥಿ ಮಾಡಿಸಬಹುದಿತ್ತು ಎನ್ನುವ ಮಾತುಗಳೂ ವ್ಯಕ್ತವಾಗುತ್ತಿದೆ.
ನಾಡಹಬ್ಬ ಮಡಿಕೇರಿ ದಸಾರ ವೀಕ್ಷಿಸಲು ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಯಾವುದೇ ಷರತ್ತು ಅಥವಾ ಶುಲ್ಕ ಇಲ್ಲದೆ ಉಚಿತ ಪ್ರವೇಶಾವಕಾಶ ಕೊಡಲಾಗಿದೆ. ಮೈದಾನಗಳು ಈ ಸ್ಥಿತಿಗೆ ಬರಲು ಅಧಿಕಾರಿಗಳೇ ನೇರ ಹೊಣೆ. ನಾವೆಷ್ಟೇ ಮನವಿ ಮಾಡಿದರೂ, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡರೂ ಕಣ್ಣು ಕಾಣದ, ಕಿವಿ ಕೇಳಿಸಿದ ಅಧಿಕಾರಿ ವೃಂದದಿAದ ಏನೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳ ಕೂಗು, ಗೋಳಿಗೆ ಯಾವುದೇ ಸ್ಪಂದನೆ ಇಲ್ಲ. ಏನಿದ್ದರೂ ಈ ಕ್ರೀಡಾಂಗಣಗಳು ಬೀಡಾಡಿ ದನಗಳು ಮೇಯುವ ಹುಲ್ಲುಗಾವಲು, ವಾಸ್ತವ್ಯ ಹೂಡುವ ವಾಸ ಸ್ಥಳ ಹಾಗೂ ವಾಹನಗಳ ನಿಲುಗಡೆ ಸ್ಥಳವಾಗಿ ಪರಿವರ್ತನೆ ಆಗಿದೆ.
ಉಮೇಶ್‌ಕುಮಾರ್, ಮಡಿಕೇರಿ ನಿವಾಸಿ
ವಾಹನ ನಿಲುಗಡೆಗೆ ಕ್ರೀಡಾಂಗಣ ಬಳಕೆ ಸರಿಯಲ್ಲ. ಕ್ರೀಡಾಂಗಣಗಳು ಕ್ರೀಡೆಗೆ ಮಾತ್ರ ಮೀಸಲಾಗಿರಬೇಕು. ಆಟದ ಮೈದಾನಗಳನ್ನು ಬೇರೆ ಉದ್ದೇಶಗಳಿಗೆ ಬಳಸುವ ಮೂಲಕ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಅವಮಾನ ಮಾಡಲಾಗುತ್ತಿದೆ. ಇನ್ನು ಮುಂದಾದರೂ ದಸರಾ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಆಟದ ಮೈದಾನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಬಳಸುವುದು ನಿಲ್ಲಬೇಕು. ಕ್ರೀಡಾಂಗಣಗಳು ಕ್ರೀಡೆಗೆ ಮಾತ್ರ ಮೀಸಲಾಗಿರಬೇಕು.
ದಿನೇಶ್ ನಿಡ್ಯಮಲೆ, ಕುಶಾಲನಗರ