ಹೊಳೆನರಸೀಪುರ ಪಟ್ಟಣದಲ್ಲಿ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಗೆ ಬಿಇಒ ಚಾಲನೆ ನೀಡಿದರು. ಸೋಮಲಿಂಗೇಗೌಡ, ಪದ್ಮಜಾ, ಸಂತೋಷ್, ಸುಜಾತಾ ಅಲಿ, ಪ್ರಕಾಶ್, ವಿವೇಕಾನಂದ ಇದ್ದರು. 
ಜಿಲ್ಲೆ

ಶಿಸ್ತು, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ನಾಗೇಶ ಎಸ್

ಹೊಳೆನರಸೀಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಹೆಚ್ಚಾಗಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆ ತಟ್ಟೇಕೆರೆ ಸಹಯೋಗದಲ್ಲಿ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಫೂರ್ತಿ ಇರಬೇಕು. ಶಿಸ್ತು ಮತ್ತು ದೈಹಿಕ ಸದೃಢತೆಗೆ ಸಹಕಾರಿಯಾಗುತ್ತದೆ. ಕ್ರೀಡಾ ಚಟುವಟಿಕೆಗಳು ಪಠ್ಯ ವಿಷಯಗಳಿಗೆ ಸ್ಫೂರ್ತಿಯಾಗಿರುತ್ತದೆ. ಯುವ ಜನತೆ ಓದಿಗೆ ಸೀಮಿತರಾಗದೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾ ತರಬೇತುದಾರರಿಂದ ಉತ್ತಮ ತರಬೇತಿ ಪಡೆಯುತ್ತಾ ಶ್ರಮವಹಿಸಿ ಆಸಕ್ತಿಯಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಬಹುದು. ಆ ದಾರಿಯಲ್ಲಿ ವಿದ್ಯಾರ್ಥಿಗಳು ಮುನ್ನುಗ್ಗಬೇಕು ಎಂದು ತಿಳಿಸಿದರು.

ಕಸಬಾ ಹೋಬಳಿಯ 23 ಪ್ರೌಢಶಾಲಾ ವಿಭಾಗಗಳಿಂದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುಜಾತ ಅಲಿ, ಪದ್ಮಜಾ, ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್, ಸಮಾಜಸೇವಕ ಐತಾಳ್, ಶಿಕ್ಷಕರಾದ ಹರೀಶ್, ಪ್ರಕಾಶ್, ರವಿ, ವಿವೇಕಾನಂದ, ಶಿವರಾಂ ಇತರರು ಇದ್ದರು.