ಕುಶಾಲನಗರ:
ಇಲ್ಲಿನ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಕ್ಕಳಿಗಾಗಿ 15 ದಿನಗಳ ಕಾಲ ಉಚಿತ ಕ್ರೀಡಾ ಶಿಬಿರ ಆಯೋಜಿಸಲಾಗಿದೆ ಎಂದು ಕ್ಲಬ್ ಕಾರ್ಯದರ್ಶಿ ಬಿ.ಟಿ. ಪೂರ್ಣೇಶ್ ತಿಳಿಸಿದ್ದಾರೆ.
ಕುಶಾಲನಗರ ಜಿಎಂಪಿ ಶಾಲಾ ಮೈದಾನದಲ್ಲಿ ಏ.6ರಿಂದ ಆರಂಭವಾಗುವ ಶಿಬಿರ ಏ.20ರ ತನಕ ನಡೆಯಲಿದೆ. ಇಲ್ಲಿ ನುರಿತ ತರಬೇತುದಾರರಿಂದ ಹಾಕಿ, ಅಥ್ಲೆಟಿಕ್ಸ್ ಹಾಗೂ ಈಜು ತರಬೇತಿ ನೀಡಲಾಗುವುದು. ಒಂದು ದಿನದ ಟ್ರಕ್ಕಿಂಗ್ ಕೂಡ ಇರಲಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಕುಶಾಲನಗರದಲ್ಲಿ ಬಡ ಮಕ್ಕಳಿಗಾಗಿ ಈ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ. ಈ ಶಿಬಿರದ ಮೂಲಕ ಅನೇಕರು ಕ್ರೀಡಾ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳಲು ಸಾಧ್ಯವಾಗಿದೆ. ಸುಮಾರು 150 ವಿದ್ಯಾರ್ಥಿಗಳು ಈ ತನಕ ತರಬೇತಿ ಪಡೆದುಕೊಂಡಿದ್ದಾರೆ. ಈ ಬಾರಿಯ ಶಿಬಿರಕ್ಕೆ ಭಾರತೀಯ ತಂಡದ ಹಾಕಿ ಆಟಗಾರರಾದ ವಿನಯ್, ಹರಿಪ್ರಸಾದ್ ಆಗಮಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಮಹಿಳಾ ಗೋಲ್ ಕೀಪರ್ ಅರ್ಪಿತಾ ಕೂಡ ಶಿಬಿರದಲ್ಲಿ ತರಬೇತಿ ಕೊಡಲಿದ್ದಾರೆ. ಆಸಕ್ತರು ಮೊ.ಸಂ. 9449831426 ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕ್ಲಬ್ ಅಧ್ಯಕ್ಷ ಹೆಚ್.ಇ. ರಮೇಶ್, ಪದಾಧಿಕಾರಿಗಳಾದ ಕೆ.ಟಿ. ಸೌಮ್ಯಾ, ಎಸ್.ಜಿ. ಮಹೇಶ್ ಹಾಗೂ ಎಸ್.ಎಂ. ನಿತಿನ್ ಇದ್ದರು.