ಜಿಲ್ಲೆ

ಒತ್ತಡ, ಸದೃಢ ಆರೋಗ್ಯಕ್ಕೆ ಕ್ರೀಡೆ ಅನಿವಾರ್ಯ ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಭಿಮತ ; ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

Tumakuru

ತುಮಕೂರು: ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಪೊಲೀಸ್ ಶಿಸ್ತಿನ ಇಲಾಖೆಯಾಗಿದ್ದು, ಪೊಲೀಸರ ಕರ್ತವ್ಯ ಮತ್ತು ಸಮಯಪ್ರಜ್ಞೆಯಿಂದಾಗಿ ಜನಸಾಮಾನ್ಯರು ಸುರಕ್ಷಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಮೂರು ದಿನಗಳು ನಡೆಯಲಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ನಗರದಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಭಾನುವಾರ ಬಲೂನ್ ಮತ್ತು ಪಾರಿವಾಳ ಹಾರಿಬಿಟ್ಟು ಹಾಗೂ ಗುಂಡು ಎಸೆಯುವುದರೊಂದಿಗೆ ಚಾಲನೆ ನೀಡಿ, ಶಿಸ್ತು, ಸಂಯಮ, ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿರುವ ಪೊಲೀಸ್ ಇಲಾಖೆಯನ್ನು ಜನರು ಗಮನಿಸುತ್ತಿರುತ್ತಾರೆ ಹಾಗಾಗಿ, ಸಿಬ್ಬಂದಿ ಪ್ರತಿ ಕ್ಷಣವೂ ಬಹಳ ಎಚ್ಚರಿಕೆಯಿಂದಲೇ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ಪ್ರತಿ ಕ್ಷಣವೂ ಒತ್ತಡ ಎಂಬುದು ಬೆನ್ನೇರಿರುತ್ತದೆ, ಈ ಎಲ್ಲ ಒತ್ತಡಗಳಿಂದ ಮುಕ್ತರಾಗಲು ಕ್ರೀಡಾಕೂಟಗಳು ಅನಿವಾರ್ಯವಾಗಿದ್ದು ದೈಹಿಕ ಮಾತ್ರವಲ್ಲದೆ ಮಾನಸಿಕ ಸ್ವಾಸ್ತ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಕ್ರೀಡೆ ಅವಿಭಾಜ್ಯ ಅಂಗವಾಗಿರಬೇಕು ಎಂದು ಆಶಿಸಿದ ವೈ.ಎಸ್.ಪಾಟೀಲ್, ಇಡೀ ಜಿಲ್ಲೆಯ ಪೊಲೀಸರು ಒಂದೆಡೆ ಸೇರಿ ಪರಸ್ಪರ ಬೆರೆಯಲು ಕ್ರೀಡಾಕೂಟ ವೇದಿಕೆಯಾಗಿದೆ, ಸ್ಫರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು ಕ್ರೀಡೆಯನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂಬ ಸಲಹೆಯಿತ್ತರು.

ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕ್ರೀಡಾಕೂಟ ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲ ಪೊಲೀಸರು ಕೂಟದಲ್ಲಿ ಭಾಗವಹಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ.ಉದೇಶ್ ಸೇರಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.

ಕ್ರೀಡಾಕೂಟದಿಂದ ದೈಹಿಕ ಹಾಗೂ ಮನಸಿಕ ಆರೋಗ್ಯ ಕಾಪಾಡಲು ಸಾಧ್ಯವಿದೆ, ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸುವುದು ಉತ್ತಮ. ವರ್ಷಕ್ಕೊಮ್ಮೆ ಪೊಲೀಸರು ಕ್ರೀಡಾಕೂಟ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ