ತಾಳಿಕೋಟೆ: ಯೋಗ, ಅಧ್ಯಾತ್ಮ ಪ್ರವಚನದಲ್ಲಿ ನಿರಂಜನ ಶ್ರೀಗಳು ತಿಳಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡರೆ ನೆಮ್ಮದಿ ಜೀವನ ಸಾಧ್ಯವಿದೆ ಎಂದು ಧಾರವಾಡದ ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮಿಗಳು ಹೇಳಿದರು.
ಯೋಗೋತ್ಸವ ಸಮಿತಿಯಿಂದ ಸ್ಥಳೀಯ ಕನ್ನಡ ಶಾಲಾ ಮೈದಾನದಲ್ಲಿ ಪ್ರವಚನಕಾರ ನಿರಂಜನ ಸ್ವಾಮಿಗಳಿಂದ ಸಾಗಿಬಂದ ಸಾಮೂಹಿಕ ಭಜನೆ, ಪ್ರವಚನದ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಳೆದ 14 ವರ್ಷಗಳ ಹಿಂದೆಯೇ ನಾನು ಇಲ್ಲಿ ಪ್ರವಚನ ನೀಡಲು ಆಗಮಿಸಿದಾಗ ಅಂದಿನ ಸುನೀಲ್ ನಮ್ಮಲ್ಲಿಯ ವಿದ್ಯೆಯನ್ನು ಅಭ್ಯಸಿಸಿ ಈಗ ಲಿಂಗಾನಂದ ಸ್ವಾಮಿಯಾಗಿ ಮಾರ್ಪಟ್ಟಿದ್ದಾರೆ. ಶೀಘ್ರದಲ್ಲಿಯೇ ಲಿಂಗಾನಂದ ಸ್ವಾಮಿಗಳ ಪಟ್ಟಾಧಿಕಾರ ಕಾರ್ಯ ನೆರವೇರಲಿದೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಎಂಬುದು ಬಹಳೇ ದೊಡ್ಡದಾಗಿದೆ. ದಿನನಿತ್ಯ ಹೆಚ್ಚಿಗೆ ನೀರು ಕುಡಿಯಬೇಕು ಎಂದರು.
ಇದೇ ವೇಳೆ ಕಳೆದ 11 ದಿನಗಳಿಂದ ಯೋಗ ತರಬೇತಿ ಹಾಗೂ ಯೋಗ ಆಧ್ಯಾತ್ಮಿಕ ಪ್ರವಚನ, ಭಜನೆ ಆಲಿಸಿದ ಕೆಲವು ಭಕ್ತರು ಅನಿಸಿಕೆ ಹಂಚಿಕೊಂಡರು.
ವೇದಿಕೆಯಲ್ಲಿ ಯೋಗಪಟು ನಿರಂಜನ ಶ್ರೀಗಳು ಉಪಸ್ಥಿತರಿದ್ದರು. ಯೋಗ ಪಟುಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು. ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.