ಮೈಸೂರು: ಅಧ್ಯಾತ್ಮ ಮತ್ತು ವೈಚಾರಿಕತೆ ಕುವೆಂಪು ಅವರ ಎರಡು ಕಣ್ಣುಗಳಿಂತದ್ದವು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಿಂದ ಸೋಮವಾರ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕುವೆಂಪು ಕಾವ್ಯ: ವಿಭಿನ್ನ ನೆಲೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಲೋಕ ಸಾಹಿತ್ಯದ ಅನನ್ಯ ಲೇಖಕ ಕುವೆಂಪು ಅವರು ಯುಗ ಪುರುಷರಾಗಿದ್ದು, ಅವರನ್ನು ಒಂದು ವಿಚಾರಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅಧ್ಯಾತ್ಮ ಮತ್ತು ವೈಚಾರಿಕತೆ ಕುವೆಂಪು ಅವರ ಎರಡು ಕಣ್ಣುಗಳಂತಿದ್ದವು ಎಂದರು.
ಕುವೆಂಪು ಅವರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ನಾಡಗೀತೆ ಬರೆದಿದ್ದರು. ಅದರಲ್ಲಿನ ಸರ್ವ ಜನಾಂಗದ ಶಾಂತಿಯ ತೋಟ ಅಸ್ತಿತ್ವಕ್ಕೆ ಬಾರದಿದ್ದರೂ ಜನ ಜನಿತವಾಗಿದೆ ಎಂದು ಹೇಳಿದರು.
ಕುವೆಂಪು ಅವರ ದೃಷ್ಠಿಯಲ್ಲಿ ಜೀವನ ಎಂಬುದು ಉತ್ಸಾಹ ಮತ್ತು ಹಬ್ಬದಂತೆ. ಅಲ್ಲದೆ ಈ ಲೋಕದಲ್ಲಿ ಯಾವುದೂ ಅಲ್ಪವಲ್ಲ ಹಾಗೂ ಇಲ್ಲಿ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಈ ದೇಹ ಎಂಬುದು ಅತ್ಯಂತ ಪವಿತ್ರವಾದದ್ದು. ಬದುಕು ಸತ್ಯ ಸಾವು ಮಿಥ್ಯ ಎಂದು ಪ್ರತಿಪಾದಿಸಿದ್ದರು ಎಂದರು.
ಕುವೆಂಪು ಅವರನ್ನು ಬಹಳ ಹತ್ತಿರದಿಂದ ಕಂಡವನು ನಾನು. ಕುವೆಂಪುರವರು ಯುಗಪುರುಷ ಮತ್ತು ಪ್ರವಾದಿ ಎಂದೇ ನಾವು ಕರೆಯಬಹುದು. ಕುವೆಂಪುರವರು ಈ ನಾಡು ಸರ್ವಜನಾಂಗದ ಶಾಂತಿಯ ತೋಟ ಆಗಬೇಕಾಗಿದೆ ಎಂದು ಅಂದೇ ಬರೆದರು ಆದರೆ ಇಂದೂ ಕೂಡ ಅದು ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಸಾಮಾನ್ಯ ಮಾನವನಾದ ಬಳಿಕ ವಿಶ್ವಮಾನವರಾಗಿ ಗುರುತಿಸಿಕೊಂಡವರು ಕುವೆಂಪು. ಇದನ್ನೇ ಜಗತ್ತಿಗೂ ಅವರು ತೋರಿಸಿಕೊಟ್ಟರು ಎಂದು ಹೇಳಿದರು.
ಹುಟ್ಟು ಸಾವಿನ ನಡುವಿನ ಕೆಲಸವನ್ನು ನೆನಪಿಸಬೇಕಾದರೆ ಕುವೆಂಪು ತ್ಯಾಗವನ್ನು ಅನುಸರಿಸಬೇಕು. ಓದುವುದರೊಂದಿಗೆ ಕೌಶಲಗಳನ್ನು ಬೆಳೆಸಿಕೊಳ್ಳಿ. ಗುರಿ ಸಾಧಿಸಲು ಶಿಸ್ತು ಹಾಗೂ ಸಂಯಮ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ನಾನು ಕುವೆಂಪು ಅವರನ್ನು ನೇರವಾಗಿ ಕಂಡಿದ್ದೇನೆ. ನಾನು ಅವರನ್ನು ನೋಡಬೇಕೆಂದು ಅವರ ಮನಗೆ ತೆರಳಿದಾಗಲೆಲ್ಲ ಅವರು ಸದಾ ಅಧ್ಯಯನದಲ್ಲಿ ತೊಡಗಿರುತ್ತಿದ್ದರು. ಅವರ ಈ ಅಧ್ಯಯನಶೀಲತೆಯೇ ಅವರನ್ನು ಇಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ ಎಂದರು.
ವಿದ್ಯಾವರ್ಧಕ ಸಂಘದ ಗೌರವ ಕೋಶಾಧ್ಯಕ್ಷ ಶ್ರೀಶೈಲರಾಮಣ್ಣ, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ನಾಗರಾಜು, ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಪ್ರಾಧ್ಯಾಪಕರಾದ ಡಾ.ಎನ್.ಆರ್.ಚಂದ್ರೇಗೌಡ, ಗಾಯಕ ಅಮ್ಮ ರಾಮಚಂದ್ರ, ಡಾ.ಟಿ.ಶ್ರೀನಿವಾಸ್ ಇತರರು ಇದ್ದರು.