ಜಿಲ್ಲೆ

ಸಂಸ್ಕಾರ ಅರಿಯಲು ಅಧ್ಯಾತ್ಮ ಸಹಕಾರಿ

ವಿದ್ಯಾ ಶೆಟ್ಟನಗೌಡ್ರ

ಅಥಣಿ: ಅರಿವು, ಆಚಾರಗಳನ್ನು ಮಠ- ಮಾನ್ಯಗಳು ನಿರಂತರವಾಗಿ ನಡೆಸಿಕೊಂಡು ಬಂದಿರುವುದರಿಂದ ಆಧ್ಯಾತ್ಮಿಕತೆಯ ಬೇರು ಗಟ್ಟಿಯಾಗಿದ್ದು, ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ತಿಳಿಸಲು ಸಹಕಾರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಶೆಟ್ಟರಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಮರುಳಸಿದ್ಧ ಶಿವಯೋಗಿಗಳ ೧೩೩ನೇ ಪುಣ್ಯಸ್ಮರಣೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದಂತೆ ಕಾಯಕ, ದಾಸೋಹ ಪರಂಪರೆ ಜತೆಗೆ ಜ್ಯ್ನಾನದಾಸೋಹವನ್ನು ಎಲ್ಲ ಮಠಗಳು ಮಾಡುತ್ತಿವೆ. ಇದರಿಂದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಸಾಕಷ್ಟು ಪ್ರಗತಿ ಹಾಗೂ ಸಮಾಜಮುಖಿ ಸೇವೆ ಮಾಡಲು ಯುವಜನಾಂಗಕ್ಕೆ ಪ್ರೇರಣೆ ಸಿಗಲಿದೆ ಎಂದರು.

ಗಜಾನನ ಮಂಗಸೂಳಿ ಮಾತನಾಡಿ, ಎಲ್ಲ ಮಠಗಳು ಅಧ್ಯಾತ್ಮದ ಜತೆ ಕಾಯಕ ದಾಸೋಹ ತಿಳಿಸುತ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸೂರ್ತಿಯಾಗಿವೆ ಎಂದು ಹೇಳಿದರು.

ನದಿಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಅಥಣಿ ಭಕ್ತರ ಸೇವೆ ಅಪಾರವಾಗಿದೆ. ಇದು ಅನಾದಿ ಕಾಲದಿಂದ ನಡೆದುಕೊಂಡ ಬಂದಿರುವ ಪದ್ಧತಿ ಇಂದಿಗೂ ಮುಂದುವರೆದಿದ್ದು, ಭಕ್ತಿಯ ಶ್ರದ್ಧಾಕೇಂದ್ರವಾಗಿದೆ ಎಂದರು.

ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು. ಬಸವರಾಜ ಮಂಗಸೂಳಿ, ಶಿವಯೋಗಿ ಗೆಜ್ಜಿ, ಈರನಗೌಡ ಪಾಟೀಲ, ಅಶೋಕ ಮೆಣಸಿ ಇತರರಿದ್ದರು.