ಸೋಮವಾರಪೇಟೆ: ಮಕ್ಕಳಿಗೆ ಸಂಸ್ಕಾರ ನೀಡಿ, ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದು ಬಸವಾಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಕರ್ಕಳ್ಳಿಯಲ್ಲಿನ ಅಕ್ಕನ ಬಳಗದ ಕಟ್ಟಡದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಮಕ್ಕಳಿಗೆ ಸಂಸ್ಕಾರದ ಅಗತ್ಯವಿದೆ. ತಾಯಂದಿರು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಬೇಕು. ಆಧುನಿಕತೆ ಬೆಳೆದಂತೆ ಆಧ್ಯಾತ್ಮ, ಸಂಸ್ಕಾರ ಮರೆಯಾಗುತ್ತಿದೆ ಎಂದರು.
ಎಲ್ಲ ತಾಯಂದಿರು ತಮ್ಮ ಮಕ್ಕಳೊಂದಿಗೆ ವಚನಗಳ ಅಭ್ಯಾಸ, ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿ ಆ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಬೇಕು. ಅಕ್ಕಮಹಾದೇವಿ ಮತ್ತು ವಚನಕಾರರ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿ ಎಂದರು.
ಬೆಂಗಳೂರಿನಲ್ಲಿ ವೈದ್ಯರಾಗಿರುವ ಬಿ.ಎಂ.ಲತಾ ಅವರು, ಅಕ್ಕನ ಬಳಗಕ್ಕೆ ಅಡುಗೆ ಪಾತ್ರೆಗಳನ್ನು ನೀಡಿದರು. ತಪೂಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ, ಖಜಾಂಚಿ ಆಶಾ ಹೂವಯ್ಯ, ಮುಖಂಡರಾದ ಶಿವಕುಮಾರ್, ಶೆಟ್ಟರು, ಮೃತ್ಯಂಜಯ ಇದ್ದರು.
ಸೋಮವಾರಪೇಟೆ ಅಕ್ಕನ ಬಳಗಕ್ಕೆ ವೈದ್ಯ ಡಾ.ಬಿ.ಎಂ.ಲತಾ ಅಡುಗೆ ಪಾತ್ರೆಗಳನ್ನು ನೀಡಿದರು. ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಗೀತಾ, ಶಿವಕುಮಾರ್, ಮೃತ್ಯುಂಜಯ ಇದ್ದರು.