ಮಂಡ್ಯ: ಇತ್ತೀಚಿನ ದಿನದಲ್ಲಿ ಮೊಬೈಲ್ ಹಾಗೂ ಟಿವಿ ಮೂಲಕ ಮಕ್ಕಳ ಮನಸ್ಸನ್ನು ಕೆಡಿಸುತ್ತಿದ್ದೇವೆ ಎಂದು ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ನಿಯಮಿತದ ಅಧ್ಯಕ್ಷ ಎಸ್.ನಾಗರಾಜು ಹೇಳಿದರು.
ನಗರದ ವೀರಶೈವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ನಿಯಮಿತದಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದ 144ನೇ ಆಧ್ಯಾತ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಧರ್ಮವನ್ನು ಯಾರು ಆಚರಣೆ ಮಾಡುತ್ತಾರೋ, ಅವರ ಬಾಯಿಂದ ಮೃದುವಾದ ಮಾತು ಬರುತ್ತದೆ. ಬಸವ ಧರ್ಮವನ್ನು ನಾವು ಆಚರಣೆ ಮಾಡಬೇಕಾದ್ದು ಎಷ್ಟು ಮುಖ್ಯ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಬಸವ ಧರ್ಮ ಎಂದರೆ ಏನು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಆಧ್ಯಾತ್ಮಿಕ ಶರಣರ ಜೀವನದ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಆಧ್ಯಾತ್ಮಿಕ ಮತ್ತು ಕಾಯಕ ವಿದ್ಯೆಯನ್ನು ಕಲಿಯದೆ ಇದ್ದರೆ ಜೀವನ ಪೂರ್ಣ ಆಗುವುದಿಲ್ಲ. ಹಾಗಾಗಿ ಆಧ್ಯಾತ್ಮಿಕದ ಕಡೆಗೆ ಸಾಗುವುದು ಅತಿ ಮುಖ್ಯ. ಅರಿವಿನ ಮನೆಯನ್ನು ತಿಳಿಯುವುದು ಅಗತ್ಯ. ಸ್ವಲ್ಪ ಸಮಯದಲ್ಲೇ ಸ್ನಾನ, ಊಟ ಮಾಡಬಹುದು. ಆದರೆ ಮನುಷ್ಯನ ಆಯಸ್ಸು ಮುಗಿದರೂ ಸಂಪೂರ್ಣ ಅರಿವನ್ನು ಪಡೆಯಲು ಆಗುವುದಿಲ್ಲ. ಎಷ್ಟೇ ಸಮಯವಾದರೂ ಜ್ಞಾನ ತುಂಬುತ್ತಲೇ ಇರುತ್ತದೆ. ಬಸವಣ್ಣನವರು ಕಾಯಕದ ಮಹತ್ವವನ್ನು ಹೇಗೆ ತೋರಿಸಿದ್ದಾರೆ ಎಂಬುದರ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ 64 ವಿದ್ಯೆಗಳಿವೆ. ಅವುಗಳಲ್ಲಿ ಆಧ್ಯಾತ್ಮ, ಕಾಯಕ ವಿದ್ಯೆಯನ್ನು ತಿಳಿಯದೇ ಇದ್ದರೆ ಏನನ್ನೂ ಸಹ ಸಾಧಿಸಲು ಆಗುವುದಿಲ್ಲ ಎಂದರು.
ತೀ.ನರಸೀಪುರ ತಾಲೂಕು ಮುಡುಕನಪುರ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಬಸವ ಸಮಿತಿ ಅಧ್ಯಕ್ಷ ಎಂ.ಬಿ. ರಾಜಶೇಖರ್, ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಷಡಕ್ಷರಿ, ದಾಸೋಹ ಪ್ರಾಯೋಜಕ ಬಿ.ಕೆ.ಮಂಜುನಾಥ್, ನಿಯಮಿತದ ಉಪಾಧ್ಯಕ್ಷ ದ್ಯಾವಣ್ಣ, ನಿರ್ದೇಶಕರಾದ ಶಿವಕುಮಾರ್, ಮಹದೇವಸ್ವಾಮಿ, ಯುವ ಮುಖಂಡರಾದ ಜಗದೀಶ್, ಮಧುಸೂದನ್, ರುದ್ರಸ್ವಾಮಿ ಇತರರಿದ್ದರು.