ಜಿಲ್ಲೆ

ಮಕ್ಕಳಿಗೆ ಶರಣರ ಜೀವನ ಪರಿಚಯಿಸಿ: ಬಸವೇಶ್ವರ ಪತ್ತಿನ ಸಂಘದ ಅಧ್ಯಕ್ಷ ಎಸ್.ನಾಗರಾಜು ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೊಬೈಲ್ ಮತ್ತು ಟಿವಿ ಮಕ್ಕಳ ಮನಸ್ಸನ್ನು ಕೆಡಿಸುತ್ತಿದ್ದೇವೆ. ಆದ್ದರಿಂದ ಅವರಗೆ ಆಧ್ಯಾತ್ಮದ ಶರಣರ ಜೀವನವನ್ನು ಪರಿಚಯಿಸಬೇಕು ಎಂದು ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಸಲಹೆ ನೀಡಿದರು.

ತಾಲೂಕಿನ ಬೇವುಕಲ್ಲು ಗ್ರಾಮದಲ್ಲಿ ಸಂಘದಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ಧ ಬಸವ ಜ್ಯೋತಿ 140ನೇ ಆಧ್ಯಾತ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವ ಧರ್ಮವನ್ನು ಯಾರು ಆಚರಣೆ ಮಾಡುತ್ತಾರೋ ಅವರಿಂದ ಮೃಧುವಾದ ಮಾತು ಬರುತ್ತದೆ. ಬಸವಧರ್ಮವನ್ನು ನಾವು ಆಚರಣೆ ಮಾಡಬೇಕಾದ್ದು ಎಷ್ಟು ಮುಖ್ಯ ಎಂಬುದನ್ನು ತಿಳಿಯಬೇಕು. ಬಸವ ಧರ್ಮ ಎಂದರೆ ಏನು, ಸಂಸ್ಥಾಪಕ ಯಾರು ಎಂಬುದು ಇಂದಿನ ಮಕ್ಕಳಿಗೆ ತಿಳಿಯುತ್ತಿಲ್ಲ ಎಂದರು.

ಆಧ್ಯಾತ್ಮ ಮತ್ತು ಕಾಯಕ ವಿದ್ಯೆ ಕಲಿಯದಿದ್ದರೆ ಜೀವನ ಪೂರ್ಣ ಆಗುವುದಿಲ್ಲ. ಹಾಗಾಗಿ ಆಧ್ಯಾತ್ಮಕತೆಯಡೆಗೆ ಸಾಗುವುದು ಅತಿ ಮುಖ್ಯ. ಜನಸಾಮಾನ್ಯರು ಧರ್ಮದಿಂದ ದೂರ ಆಗುತ್ತಿದ್ದಾರೆ. ಆದ್ದರಿಂದ ಜನರ ಬಳಿಗೆ ಧರ್ಮವನ್ನು ಕೊಂಡೊಯ್ಯಬೇಕಾಗಿದೆ. ಅರಿವಿನ ಮನೆಯನ್ನು ತಿಳಿಯುವುದು ಅಗತ್ಯ. ಸ್ವಲ್ಪ ಸಮಯದಲ್ಲೇ ಸ್ನಾನ, ಊಟ ಮಾಡಬಹುದು. ಆದರೆ ಮನುಷ್ಯನ ಆಯಸ್ಸು ಮುಗಿದರೂ ಸಂಪೂರ್ಣ ಅರಿವನ್ನು ಪಡೆಯಲಾಗದು. ಎಷ್ಟು ಸಮಯವಾದರೂ ಜ್ಞಾನ ತುಂಬುತ್ತಲೇ ಇರುತ್ತದೆ ಎಂದು ಹೇಳಿದರು.

ಬಸವಣ್ಣನವರು ಕಾಯಕದ ಮಹತ್ವವನ್ನು ಹೇಗೆ ತೋರಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ 64 ವಿದ್ಯೆಗಳಿವೆ. ಅವುಗಳಲ್ಲಿ ಆಧ್ಯಾತ್ಮ, ಕಾಯಕ ವಿದ್ಯೆ ತಿಳಿಯದಿದ್ದರೆ ಪರಿಪೂರ್ಣತೆ ಸಾಧಿಸಲಾಗದು. ಆರೋಗ್ಯ ವೃದ್ಧಿಸುವ ಹಾಲಿಗೆ ಬೆಲೆ ಇಲ್ಲದಂತಾಗಿದೆ. ಆದರೆ ಆರೋಗ್ಯ ಕೆಡಿಸಿ, ಮನೆ ಹಾಳು ಮಾಡಿ ಶಾಂತಿಯನ್ನು ಕೆಡಿಸುವ ಹಾಲ್ಕೋಹಾಲ್‌ಗೆ ಬೆಲೆ ಇದೆ ಎಂದು ವಿಷಾಧಿಸಿದರು.

ಮಳವಳ್ಳಿ ತಾಲೂಕಿನ ಧನಗೂರು ವೀರ ಸಿಂಹಾಸನ ಸಂಸ್ಥಾನ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ನಿರ್ದೇಶಕರಾದ ಶಿವಕುಮಾರ್, ಪುಟ್ಟಬುದ್ದಿ, ಮಹದೇವಸ್ವಾಮಿ, ವೀರಶೈವ ಸಮಾಜದ ಹಿರಿಯ ಮುಖಂಡರಾದ ಗುರುಶಾಂತಪ್ಪ, ರುದ್ರಸ್ವಾಮಿ, ಮಹದೇವಪ್ಪ, ಮಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಸೋಮಶೇಖರ್, ಬೇವುಕಲ್ಲು ಗ್ರಾಪಂ ಮಾಜಿ ಅಧ್ಯಕ್ಷ ದಕ್ಷಿಣಾಮೂರ್ತಿ, ಸದಸ್ಯರಾದ ರಾಜೇಶ್ವರಿ, ಮಹದೇವಮ್ಮ, ಭಾಗ್ಯ, ರಾಜೇಶ್ವರಿ, ಮಧುಸೂದನ್, ಡಿ.ಎಂ.ಜಗದೀಶ್, ನಾಗರಾಜು, ಮಹೇಶ್, ಬಸವಲಿಂಗಪ್ಪ ಇತರರಿದ್ದರು.