ಜಿಲ್ಲೆ

ಸಮಾಜಕ್ಕೆ ಬಸವ ಧರ್ಮದ ಆದರ್ಶ ಅತ್ಯಗತ್ಯ: ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ನಾಗರಾಜು ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರಸ್ತುತ ಸನ್ನಿವೇಶದಲ್ಲಿ ಇಡೀ ಸಮಾಜ ಬಸವ ಧರ್ಮದ ಆದರ್ಶಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದು ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಅಭಿಮತ ವ್ಯಕ್ತಪಡಿಸಿದರು.

ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೃದಯ, ಮನಸ್ಸು ಹಾಗೂ ನಮ್ಮ ಜೀವನದ ನಡೆಗೆ ಬಸವ ಧರ್ಮ ಪ್ರೇರಣೆ ಕೊಡುತ್ತದೆ. ಯಾರು ಬಸವ ಧರ್ಮದ ಮಾರ್ಗದಲ್ಲಿ ನಡೆದುಕೊಳ್ಳುವರೋ ಅವರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುತ್ತದೆ. ಸಜ್ಜನರನ್ನಾಗಿ ಬದುಕಲು ಅವಕಾಶ ಮಾಡಿಕೊಡುತ್ತದೆ ಎಂದರು.

ಪೂಜೆ ಮಾಡಲು ನಾವು ದೂರದ ಕಾಶಿ ಅಥವಾ ಕೇದಾರನಾಥಕ್ಕೆ ಹೋಗುವ ಅಗತ್ಯವಿಲ್ಲ. ಬದಲಿಗೆ ಉಪನ್ಯಾಸ, ದಾಸೋಹ ಮಾಡಬಹುದು. ಹಲವರಿಗೆ ಬಸವಾದಿ ನುಡಿಗಳನ್ನು ತಿಳಿಸಿ ಕೊಡುವುದರಿಂದ ಕೂಡಲಸಂಗಮವನ್ನೇ ಪೂಜಿಸಿ, ಅದರ ಫಲ ದೊರಕಿಸಿಕೊಳ್ಳಬಹುದು. ಯಾವುದೇ ಚಿಂತೆ ಇಲ್ಲದೆ ಏಕ ಚಿತ್ತದಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಏನೂ ಅರಿಯದ ಮರವೇ ಒಂದು ಸಣ್ಣ ಅಪೇಕ್ಷೆಯೂ ಇಲ್ಲದೆ ಪರೋಪಕಾರವನ್ನು ಬಗೆಯುತ್ತದೆ. ನಾವೂ ಕೂಡ ನಿಸ್ವಾರ್ಥದಿಂದ ಪರೋಪಕಾರದ ಚಿಂತನೆಯನ್ನು ನಡೆಸಬೇಕು. ಅದಕ್ಕಾಗಿ ನಾವು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಹಣಕೊಳ ಶ್ರೀಮಠದ ಚಿದ್ವನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಲೆಚಾಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ನಾಗರಾಜು ಉಪನ್ಯಾಸ ನೀಡಿದರು. ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ನಿರ್ದೇಶಕರಾದ ಮಹದೇವಸ್ವಾಮಿ, ಹೊನ್ನಮ್ಮ, ಶಿವಕುಮಾರ್, ಪುಟ್ಟಬುದ್ದಿ, ಮುಖಂಡರಾದ ಎ.ಪಿ.ಗುರುಸಿದ್ದಯ್ಯ, ಬಿ.ಪಿ.ಶಿವಲಿಂಗಯ್ಯ, ಕೆಂಪಯ್ಯ, ನಿವೃತ್ತ ಎಸ್‌ಐ ರುದ್ರಸ್ವಾಮಿ, ಎನ್.ಮಹೇಶ್‌ಕುಮಾರ್, ಜಗದೀಶ್, ಎಚ್.ಜೆ.ಚಂದ್ರಮೌಳೇಶ್ವರ, ಮಧುಕುಮಾರ್, ಮೋಹನ್ ಇತರರಿದ್ದರು.