ಜಮಖಂಡಿ: ಶಿಕ್ಷಣವೆಂದರೆ ಕೇವಲ ಆನ್‌ಲೈನ್ ಮಾಹಿತಿಯಲ್ಲ. ಪುಸ್ತಕದ ಜ್ಞಾನವೂ ಅಲ್ಲ. ವಿದ್ಯಾರ್ಥಿಗಳ ಬೌದ್ಧಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕವಾದ ಸರ್ವಾಂಗೀಣ ಬೆಳವಣಿಗೆಯೇ ನಿಜವಾದ ಶಿಕ್ಷಣ ಎಂದು ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ ಹೇಳಿದರು.
ತಾಲೂಕಿನ ಹುನ್ನೂರು-ಮಧುರಖಂಡಿ ಬಸವಜ್ಞಾನ ಗುರುಕುಲದ ಆಶ್ರಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬಸವಚೇತನ ಶಾಲೆ ವಾರ್ಷಿಕೋತ್ಸವದಲ್ಲಿ ಬಸವ ಪುತ್ಥಳಿಗೆ ಪೂಜೆ ಸಲ್ಲಿಸಿ ಹಾಗೂ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಕರ್ತವ್ಯ ಪಾಲನೆ, ವಿದ್ಯಾರ್ಥಿಗಳ ಅಧ್ಯಯನ ಹಾಗೂ ಪಾಲಕರ ಗಮನ ತುಂಬ ಅಗತ್ಯವಿದೆ. ಶಿಕ್ಷಕರು ಜ್ಞಾನ ಸೂರ್ಯ, ಜ್ಞಾನ ಮಂದಿರದ ಅರ್ಚಕರಾಗಬೇಕು. ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಬೇಕು. ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಮೂಡಿದಾಗ ಮಾತ್ರ ವಿದ್ಯಾರ್ಥಿಗಳ ಹೃದಯಕಮಲ ಅರಳಲು ಸಾಧ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಮಾತನಾಡಿ, ಬಸವಚೇತನ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಕಲಿಕೆಗೆ ಶರಣರ ಸ್ಪರ್ಶ ನೀಡಲಾಗಿದೆ. ಇಂಗ್ಲಿಷ್ ಬೋಧನೆಗೆ ಪಾಶ್ಚಾತ್ಯ ಪದ್ಧತಿ ಬದಲಾಗಿ ಬಸವ ಪರಂಪರೆ ಹುಟ್ಟು ಹಾಕಲಾಗಿದೆ. ಶರಣ ಸಂಸ್ಕೃತಿಯ ಸಂಸ್ಕಾರ ಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಮಾತನಾಡಿ, ಇಂದಿನ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಸಾಲದು. ಬದಲಾಗಿ ಸಂತೃಪ್ತ ಜೀವನಕ್ಕೆ ಬೇಕಾಗುವ ಆಂತರಿಕ ಪ್ರತಿಭೆ ಗುರುತಿಸಿ ಅರಳಿಸುವ ಶಿಕ್ಷಣ ಬೇಕಾಗಿದೆ. ಮಕ್ಕಳಲ್ಲಿ ಪ್ರೀತಿ, ಕರುಣೆ, ದಯೆ ತುಂಬುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕು ಎಂದರು.
ಸಿಟಿಇ ಉಪನ್ಯಾಸಕ ಪ್ರಭು ಹಿಡಕಲ್, ಶಿಕ್ಷಣ ಸಂಯೋಜಕ ಸಂತೋಷ ತಳಕೇರಿ, ಕ್ಷೇತ್ರ ಸಮನ್ವಯಾಧಿಕಾರಿ ರಮೇಶ ಅವಟಿ, ಸಿಆರ್‌ಪಿ ಎಂ.ಎಚ್. ಚನಗೊಂಡ, ನಿವೃತ್ತ ಮುಖ್ಯಶಿಕ್ಷಕ ವಿ.ಕೆ. ಗಿರಡ್ಡಿ ಮಾತನಾಡಿದರು.
ಆಡಳಿತಾಧಿಕಾರಿ ಎಂ.ಜಿ. ದಾಸರ, ವ್ಯವಸ್ಥಾಪಕ ಗಿರೀಶ ಬಿಳ್ಳೂರ ಇದ್ದರು. ಶಿಕ್ಷಕಿಯರಾದ ರಕ್ಷಿತಾ ತೇರದಾಳ, ಪ್ರಮೋದಿನಿ ತೇಲಿ ಪ್ರಾರ್ಥಿಸಿದರು. ಮುಖ್ಯಶಿಕ್ಷಕಿ ಮಹಾಲಕ್ಷ್ಮಿ ಕಲಬುರ್ಗಿ ಸ್ವಾಗತಿಸಿದರು. ಶಿಕ್ಷಕ ಆರ್.ಬಿ. ಹಡಗಲಿ ನಿರೂಪಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆದವು.