ಕಾರವಾರ: ಅನುದಾನಿತ ಪ್ರೌಢಶಾಲೆ ಕಟ್ಟಡ ರಿಪೇರಿಗೆ ಸರ್ಕಾರದ ಅನುದಾನ ಬಳಕೆಗೆ ಜಿಪಂ ಹಾಗೂ ಕೆಆರ್‌ಐಡಿಎಲ್ ಅಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ ತಿರಸ್ಕರಿಸಿದ್ದಾರೆ. ಮತ್ತು ಪ್ರಸ್ತಾವನೆ ತಯಾರಿಸಿದ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಶಾಲೆ, ಹಾಸ್ಟೆಲ್ ಕಟ್ಟಡಗಳ ರಿಪೇರಿಗೆ ಸರ್ಕಾರದಿಂದ ವಿಶೇಷ ಅನುದಾನ ಮಂಜೂರಾಗಿತ್ತು. ತುರ್ತಾಗಿ ದುರಸ್ತಿ ಅಗತ್ಯವಿರುವ ಸರ್ಕಾರಿ ಶಾಲೆ, ಹಾಸ್ಟೆಲ್‌ಗಳ ಪಟ್ಟಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಪಡೆಯದೇ ತಮಗೆ ಬೇಕಾದಲ್ಲಿ ಅನುದಾನ ಬಳಕೆ ಮಾಡಲು ಜಿಪಂ ಹಾಗೂ ಕೆಆರ್‌ಐಡಿಎಲ್ ಅಧಿಕಾರಿಗಳು ಮುಂದಾಗಿರುವುದು ಮಂಗಳವಾರ ಜಿಪಂ ಸಭಾಭವನದಲ್ಲಿ ಜಿಪಂ ಆಡಳಿತಾಧಿಕಾರಿಯೂ ಆಗಿರುವ ರಿತೇಶ ಕುಮಾರ ಸಿಂಗ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಬಹಿರಂಗವಾಯಿತು.
ಜಿಪಂ ಅಧಿಕಾರಿಯ ಪ್ರಸ್ತಾವನೆಗೆ ಒಪ್ಪಿಗೆ ನೀಡದ ಉಸ್ತುವಾರಿ ಕಾರ್ಯದರ್ಶಿ ಸಿಂಗ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅನುದಾನಿತ ಪ್ರೌಢಶಾಲೆಗೆ ಸರ್ಕಾರದ ನೇರ ಅನುದಾನ ಬಳಕೆಗೆ ಅವಕಾಶವಿಲ್ಲ. ಹಾಗೆ ಮಾಡಿದರೆ, ಅಮಾನತಾಗುತ್ತೀರಿ ಎಂದು ಎಚ್ಚರಿಸಿದರು. ಯಾರೋ ಪ್ರಸ್ತಾವನಾ ವರದಿ ತಯಾರಿಸಿದರು ಎಂದರೆ ಅದನ್ನು ನೋಡದೇ ಸಹಿ ಮಾಡುವುದು ಸರಿಯಲ್ಲ ಎಂದು ಗದರಿದರು. ಕಾಮಗಾರಿಯನ್ನು ಬದಲಾಯಿಸುವಂತೆ ಸೂಚಿಸಿದರು.
ಆಗಿದ್ದೇನು..?
ಶಾಲೆ, ಹಾಸ್ಟೆಲ್ ರಿಪೇರಿಗೆ ಸಂಬಂಧಿಸಿದಂತೆ ಕಾರವಾರ ಶೈಕ್ಷಣಿಕ ಜಿಲ್ಲೆಯ 2 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 12 ಕಾಮಗಾರಿಗಳನ್ನು ಗುರುತಿಸಿ, ಅದನ್ನು ಕೆಆರ್‌ಐಡಿಎಲ್‌ಗೆ ವಹಿಸಿ, ಅನುಮತಿಗಾಗಿ ಜಿಪಂ ಸಾಮಾನ್ಯ ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮಂಡಿಸಿದರು. ಕುಮಟಾ ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್ ಕಟ್ಟಡದ ನೆಲಹಾಸು ಹಾಗೂ ಇತರ ರಿಪೇರಿ ಕಾರ್ಯಗಳಿಗೆ 30 ಲಕ್ಷ ರೂ.ಗಳನ್ನು ವ್ಯಯಿಸಲು ಅನುಮತಿ ನೀಡುವಂತೆ ಕೋರಿದರು. ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ ಎಂದು ಕುಮಟಾ ಬಿಇಒ ಹಾಗೂ ತಾಪಂ ಇಒ ಆಗಿರುವ ರಾಜೇಂದ್ರ ಭಟ್ ಅವರಲ್ಲಿ ಉಸ್ತುವಾರಿ ಕಾರ್ಯದರ್ಶಿಗಳು ಕ್ರಾಸ್ ವೆರಿಫಿಕೇಶನ್ ಮಾಡಿದಾಗ ಜಿಪಂ ಅಽಕಾರಿಗಳು ಮಾಡಿದ ಲೋಪ ಬಹಿರಂಗವಾಯಿತು. "ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ನಲ್ಲಿ 46 ವಿದ್ಯಾರ್ಥಿಗಳು ಮಾತ್ರವಿದ್ದಾರೆ. ಅದು ಅನುದಾನಿತ ಹೈಸ್ಕೂಲ್ ಆಗಿದ್ದು, ರಿಪೇರಿಗೆ ಅನುದಾನ ನೀಡುವಂತೆ ನಮ್ಮಿಂದ ಯಾವುದೇ ಪ್ರಸ್ತಾವನೆ ಕಳಿಸಿಲ್ಲ ಎಂದು ರಾಜೇಂದ್ರ ಭಟ್ ಸಭೆಗೆ ತಿಳಿಸಿದರು. ಶಿರಸಿ ಮಾರಿಕಾಂಬಾ ಹೈಸ್ಕೂಲ್ ಕಟ್ಟಡ ಬೀಳುವ ಪರಿಸ್ಥಿತಿಯಲ್ಲಿದೆ. ತುರ್ತು ರಿಪೇರಿ ಕಾರ್ಯ ಅಗತ್ಯವಿದೆ. ಅದಕ್ಕೂ ಯಾವುದೇ ಅನುದಾನ ಮೀಸಲಿರಿಸಿಲ್ಲವೇಕೆ ಎಂದು ರಿತೇಶಕುಮಾರ ಸಿಂಗ್ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಶಿರಸಿ ಡಿಡಿಪಿಐ ಬಸವರಾಜ್ ಮಾತನಾಡಿ, ನನ್ನ ಮೂಲಕ ಯಾವುದೇ ಪ್ರಸ್ತಾವನೆ ಹೋಗಿಲ್ಲ ಎಂದು ತಿಳಿಸಿದರು. ಒಟ್ಟಾರೆ ಅಗತ್ಯವಿರುವಲ್ಲಿ ಬಿಟ್ಟು ತಮಗೆ ಬೇಕಾದಲ್ಲಿ ಕಾಮಗಾರಿ ಮಾಡಿ, ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯುವ ಅಧಿಕಾರಿಗಳ ಸಂಚು ಸಭೆಯಲ್ಲಿ ಬಯಲಾಯಿತು. ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಡಿಸಿ ಪ್ರಕಾಶ ರಜಪೂತ ವೇದಿಕೆಯಲ್ಲಿದ್ದರು.
ಸಿದ್ದಾಪುರ ತಾಲೂಕಿನಲ್ಲಿ ಒಂದೇ ದಿನ 8 ಜನರಲ್ಲಿ ಮಂಗನ ಕಾಯಿಲೆ(ಕೆಎಫ್‌ಡಿ) ಪ್ರಕರಣಗಳು ಖಚಿತವಾಗಿವೆ. ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೋಮವಾರ 8 ಪ್ರಕರಣಗಳು ಪತ್ತೆಯಾಗಿದ್ದು, 7 ಜನ ಸಿದ್ದಾಪುರ ಆಸ್ಪತ್ರೆಯಲ್ಲಿ, ಒಬ್ಬ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಜನ ಮನೆಯಲ್ಲಿದ್ದಾರೆ. ಒಟ್ಟಾರೆ ಈ ವರ್ಷ 16 ಜನರಲ್ಲಿ ಕೆಎಫ್‌ಡಿ ಕಂಡುಬಂದಿದೆ ಎಂದು ಡಿಎಚ್‌ಒ ಡಾ.ನೀರಜ್ ಬಿ.ವಿ.ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ 7 ತಾಲೂಕುಗಳಲ್ಲಿ ಈ ಹಿಂದೆ ಕೆಎಫ್‌ಡಿ ಕಾಣಿಸಿಕೊಂಡಿತ್ತು. ರೋಗ ಹರಡುವ ಉಣ್ಣೆ ಅಥವಾ ಉಣುಗಳ ನಿಯಂತ್ರಣಕ್ಕೆ ಡೆಫ್ ಎಂಬ ಔಷಧದ ಬಾಟಲಿಗಳನ್ನು ಪ್ರತಿ ಮನೆಗೆ ಎರಡರಂತೆ ನೀಡಲು ಯೋಜಿಸಲಾಗಿದೆ. ಜಿಲ್ಲೆಗೆ 50 ಸಾವಿರ ಬಾಟಲಿಗಳ ಅವಶ್ಯಕತೆ ಇದೆ. ಇದುವರೆಗೆ 11 ಸಾವಿರ ಬಾಟಲಿಗಳು ಪೂರೈಕೆಯಾಗಿದ್ದು, ಉಳಿದವನ್ನು ಜಿಪಂ ಅನುದಾನದಲ್ಲಿ ಖರೀದಿಸಲು ಅನುಮತಿ ನೀಡುವಂತೆ ಡಿಎಚ್‌ಒ ಮನವಿ ಮಾಡಿದರು.
ಇದನ್ನೂ ಓದಿ: ಬನವಾಸಿ ರಸ್ತೆಯಲ್ಲಿ ಗಡಿ ಮಾರಿ ಪೂಜೆ