ಜಿಲ್ಲೆ

ರಾ.ಹೆ.ಯೋಜನೆಗಳ ಶೀಘ್ರ ಅನುಮೋದನೆ

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವ ಅತಿ ಅವಶ್ಯವಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಸಂಸದ ಗೋವಿಂದ ಎಂ. ಕಾರಜೋಳ ಅವರು ಹೊಸದಿಲ್ಲಿಯಲ್ಲಿ ಬುಧವಾರ ಹೆದ್ದಾರಿ ಸಚಿವ ನಿತಿನ್‌ಗಡ್ಕರಿ ಅವರಿಗೆ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-150ಎ ಚಳ್ಳಕೆರೆ ಮೂಲಕ ಹಾದುಹೋಗುತ್ತಿದ್ದು, ಈ ನಗರ ವ್ಯಾಪ್ತಿಯಲ್ಲಿ ಅಂದಾಜು 9 ಕಿ.ಮೀ. ಹೆದ್ದಾರಿಯನ್ನು ಒನ್ ಟೈಮ್ ಇಂಪ್ರೂವ್‌ಮೆಂಟ್ ಯೋಜನೆಯಡಿ ಅಭಿವೃದ್ಧಿಪಡಿಸುವುದು. ರಾ.ಹೆ. 48 ಹಾಗೂ 150-ಎ ಹಿರಿಯೂರು ನಗರದ ಹೊರಭಾಗದಲ್ಲಿ ಛೇದಿಸುತ್ತಿದ್ದು, ಇಲ್ಲಿ ಕ್ಲೋವರ್ ಲೀಫ್ ಜಂಕ್ಷನ್ ನಿರ್ಮಾಣ.

ಮೊಳಕಾಲ್ಮೂರು ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ, ಭಾರತ್ ಮಾಲಾ ಪರಿಯೋಜನೆಯಡಿ ನಿರ್ಮಾಣವಾಗುತ್ತಿರುವ ಚಳ್ಳಕೆರೆ-ಹಿರಿಯೂರು ಮಧ್ಯದ ಹೆದ್ದಾರಿಯಲ್ಲಿ ಉದ್ಬವಿಸಿರುವ ಹಲವು ಗ್ರಾಮಗಳ ಸಮಸ್ಯೆ ಪರಿಹರಿಸುವುದು. ರಾ.ಹೆ.48ರ ಶಿರಾ ತಾಲೂಕು ಚಿಕ್ಕನಹಳ್ಳಿ ಬಳಿ ನಿರ್ಮಾಣವಾಗಿರುವ ಕೆಳಸೇತುವೆ ಸರಿಪಡಿಸುವುದು.

ಹಿರಿಯೂರು ತಾಲೂಕು ಪಟ್ರೆಹಳ್ಳಿ ಬಳಿ ಕೆಳಸೇತುವೆ ನಿರ್ಮಾಣ, ಶಿರಾ ಪಟ್ಟಣದಲ್ಲಿ ಬಾಕಿ ಉಳಿದ 3.90 ಕಿ.ಮೀ. ಸರ್ವೀಸ್ ರಸ್ತೆ ಪೂರ್ಣಗೊಳಿಸುವುದು. ರಾ.ಹೆ.173ನ್ನು ಹೊಳಲ್ಕೆರೆ ಪಟ್ಟಣದಿಂದ ದಾವಣಗೆರೆ ತಾಲೂಕು ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿ 48ರವರೆಗೆ ವಿಸ್ತರಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಚಿವರೊಂದಿಗೆ ಚರ್ಚಿಸಲಾಗಿದೆ.

ಈ ಎಲ್ಲ ವಿಷಯಗಳು ಈಗಾಗಲೇ ಹೆದ್ದಾರಿ ಸಚಿವಾಲಯದಲ್ಲಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಶೀಘ್ರದಲ್ಲೇ ಈ ಎಲ್ಲ ಯೋಜನೆಗಳಿಗೆ ಆದ್ಯತೆ ಮೇರೆಗೆ ಅನುಮೋದನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಕಾರಜೋಳ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.