ಜಿಲ್ಲೆ

ಬಾಹ್ಯ ವರ್ತುಲ ರಸ್ತೆ ಯೋಜನೆಗೆ ವೇಗ

ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರಿನ ಅಭಿವೃದ್ಧಿಗೆ ಪೂರಕವಾಗಿರುವ ಮತ್ತು ಬಹುನಿರೀಕ್ಷಿತ ಯೋಜನೆಗಳ ಪೈಕಿ ಒಂದಾಗಿರುವ ಬಾಹ್ಯ ವರ್ತುಲ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ನಿರ್ಮಾಣ ಯೋಜನೆಗೆ ವೇಗ ಸಿಕ್ಕಿದ್ದು, ಈ ಸಂಬಂಧ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಶೀಘ್ರದಲ್ಲೇ ಸರ್ವೇ ಕೆಲಸ ಆರಂಭವಾಗಲಿದೆ.

ಯೋಜನೆಯ ವಿಸ್ತೃತ ವರದಿ ತಯಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಜು. 23ಕ್ಕೆ ಮುಕ್ತಾಯವಾಗಲಿದೆ. ಅಲ್ಲಿಯವರೆಗೂ ಆಸಕ್ತರು ಟೆಂಡರ್‌ನಲ್ಲಿ ಭಾಗಿಯಾಗಬಹುದು. 23ರಂದೇ ಟೆಂಡರ್ ಅಂತಿಮಗೊಳ್ಳಲಿದೆ. ಅತಿ ಕಡಿಮೆ ಮೊತ್ತವನ್ನು ಕೋಟ್ ಮಾಡಿದವರಿಗೆ ಟೆಂಡರ್ ನೀಡಲಾಗುತ್ತದೆ. ಬಳಿಕ ಸರ್ವೇ ಕಾರ್ಯ ಶುರುವಾಗಲಿದೆ. ಟೆಂಡರ್ ಪಡೆಯುವವರು ಸರ್ವೇ ನಡೆಸಿ 2 ಅಥವಾ 3 ತಿಂಗಳ ಒಳಗೆ ವಿಸ್ತೃತ ಯೋಜನಾ ವರದಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಿದ್ದಾರೆ. ಬಳಿಕ ಸರ್ವೇ ವರದಿಯನ್ನು ಮುಡಾ ವತಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರದ ನಿರ್ದೇಶನ, ಅನುದಾನದ ಆಧಾರದ ಮೇಲೆ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮುಡಾ ಅಧೀಕ್ಷಕ ಇಂಜಿನಿಯರ್ ಚನ್ನಕೇಶವ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಈ ನಡುವೆ, ಪೆರಿಫೆರಲ್ ರಿಂಗ್‌ರೋಡ್ ನಿರ್ಮಾಣದ ಸಾಧಕ, ಬಾಧಕಗಳ ಚರ್ಚೆ ಸಂಬಂಧ ಸಾರ್ವಜನಿಕ ವಲಯದಲ್ಲೂ ಜೋರಾಗಿಯೇ ಇದೆ. ಈ ಯೋಜನೆ ಕಾರ್ಯಗತವಾದರೆ ಮೈಸೂರಿನ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ.

ನನೆಗುದಿಗೆ ಬಿದ್ದಿದ್ದ ಯೋಜನೆ!

ಬೆಂಗಳೂರು ನಂತರ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ 2040ರ ವೇಳೆಗೆ ಜನಸಂಖ್ಯೆ 25ರಿಂದ 30 ಲಕ್ಷಕ್ಕೆ ಏರಬಹುದು ಎಂಬುದನ್ನು ಗುರಿಯಾಗಿರಿಸಿಕೊಂಡು ಮುಡಾ ಈ ಹಿಂದೆಯೇ ನಗರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಸಂಬಂಧ 750 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಮುಂದಾಗಿತ್ತು.

ಆದರೆ ಆಗ ಯೋಜನೆ ಸಂಬಂಧ ಸಮೀಕ್ಷೆಯೇ ನಡೆಯದೆ ನನೆಗುದಿಗೆ ಬಿದ್ದಿತ್ತು. ಬಳಿಕವೂ ಇರುವ ವರ್ತುಲ ರಸ್ತೆಯಿಂದ (ರಿಂಗ್ ರೋಡ್) 5ರಿಂದ 8 ಕಿ.ಮೀ. ದೂರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ಸಮೀಕ್ಷೆ ನಡೆಸಿ ಎಷ್ಟು ಭೂಮಿ ಅಗತ್ಯವಿದೆ, ಯಾವ ಗ್ರಾಮಗಳ ಮೇಲೆ ಹಾದು ಹೋಗುತ್ತದೆ, ಪ್ರಸ್ತುತ ಇರುವ ಯಾವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಬಹುದು, ಒಟ್ಟಾರೆ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಮುಡಾ 5 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದರೂ ಯೋಜನೆ ಟೇಕ್ಾ ಆಗಿರಲಿಲ್ಲ. ಪ್ರಸ್ತುತ ಯೋಜನೆಗೆ ಮರುಜೀವ ಬಂದಿದೆ.

2016ರ ಸಿಡಿಪಿಯಲ್ಲಿಯೇ ಪೆರಿಫೆರಲ್ ರಿಂಗ್ ರೋಡ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಮುಂದಿನ 20 ವರ್ಷಗಳ ನಗರದ ಬೆಳವಣಿಗೆಯನ್ನು ಗಮದಲ್ಲಿಟ್ಟುಕೊಂಡು ಸದರಿ ಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಭಾರತ್ ಮಾಲಾ ೇಸ್-2 ಯೋಜನೆಯಲ್ಲಿ ಸೇರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಡಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ವರ್ಷದ ಹಿಂದೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಕುರಿತು ಗಮನ ಸೆಳೆಯಲಾಯಿತು. ಅದಕ್ಕೆ ಸಚಿವರೂ ಪೂರಕವಾಗಿ ಸ್ಪಂದಿಸಿದ್ದರು.

ಯೋಜನೆಯಿಂದ ಏನೆಲ್ಲ ಉಪಯೋಗ?:

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಿದರೆ ದೊಡ್ಡ ವಾಹನಗಳೂ ಸೇರಿದಂತೆ ಎಲ್ಲ ಬಗೆಯ ವಾಹನಗಳು ಸರಾಗವಾಗಿ ಸಂಚರಿಸಲು ಅನುಕೂಲವಾಗುತ್ತದೆಯಲ್ಲದೆ, ಹೊಸ ಬಡಾವಣೆಗಳು, ಗ್ರಾಮಗಳಿಗೂ ಸಂಪರ್ಕ ಸೌಲಭ್ಯ ಸಿಗುವುದರಿಂದ ಮುಂದೆ ಮೈಸೂರು ನಗರದಲ್ಲಿ ಸಂಚಾರ ಒತ್ತಡ ತಪ್ಪಿಸಬಹುದಾಗಿದೆ.

ರಾಜ್ಯವಷ್ಟೇ ಅಲ್ಲದೆ, ದೇಶ-ವಿದೇಶಗಳಿಂದ ಮೈಸೂರಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿನ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವುದು ಒಂದೆಡೆಯಾದರೆ, ಮೈಸೂರು ನಗರ ಮತ್ತು ಜಿಲ್ಲಾದ್ಯಂತ ಕೈಗಾರಿಕಾ ಪ್ರದೇಶಗಳು ಸ್ಥಾಪನೆಗೊಂಡಿರುವ ಕಾರಣ ಹಾಗೂ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಆರಂಭಗೊಂಡಿರುವುದು ನಗರದಲ್ಲಿ ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ಅಧಿಕವಾಗಲು ಪ್ರಮುಖ ಕಾರಣವಾಗಿದೆ.

ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸದ್ಯ ಇರುವ 44 ಕಿ.ಮೀ. ಉದ್ದದ ರಿಂಗ್ ರಸ್ತೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ನಗರದ ಟ್ರಾಫಿಕ್ ಒತ್ತಡಕ್ಕೆ ಮುಕ್ತಿ ಸಿಗಲಿದೆ.

ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣದ ವಿಸ್ತೃತ ಯೋಜನಾ ವರದಿ ತಯಾರಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 23ಕ್ಕೆ ಮುಕ್ತಾಯವಾಗಲಿದೆ. ಬಳಿಕ ಯೋಜನೆಗೆ ಎಷ್ಟು ಭೂಮಿ ಅಗತ್ಯವಿದೆ, ಯಾವ ಗ್ರಾಮಗಳ ಮೇಲೆ ಹಾದು ಹೋಗಲಿದೆ, ಪ್ರಸ್ತುತ ಇರುವ ಯಾವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಬಹುದು, ಒಟ್ಟಾರೆ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಸರ್ವೇ ಕಾರ್ಯ ಆರಂಭಿಸಲಾಗುವುದು.ಜಿ.ಟಿ.ದಿನೇಶ್‌ಕುಮಾರ್, ಮುಡಾ ಆಯುಕ್ತ