ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಇಲಾಖೆಗಳ ಕಾರ್ಯ ಪ್ರಗತಿ ಪರಿಶೀಲಿಸಿದರು. 
ಜಿಲ್ಲೆ

ಸಾರ್ವಜನಿಕ ಕೆಲಸಗಳಿಗೆ ವೇಗ ನೀಡಿ

ಲೋಕೇಶ್ ಮನು. ಡಿ

 ಹೊಳೆನರಸೀಪುರ: ಸಾರ್ವಜನಿಕ ಕೆಲಸಗಳ ಅಭಿವೃದ್ಧಿಗೆ ವೇಗ ನೀಡುವಂತೆ ಸಂಸದ ಶ್ರೇಯಸ್ ಎಂ.ಪಟೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಅಧಿಕಾರಿಗಳ ತುರ್ತು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ತಾಲೂಕಿನಲ್ಲಿ ಪದೇ ಪದೆ ವಿದ್ಯುತ್ ಕಡಿತಗೊಳಿಸಬಾರದು. ಬೇಸಿಗೆಯ ಅಧಿಕ ಉಷ್ಣಾಂಶದಿಂದ ರೈತರ ಬೆಳೆಗೆ ಸಮಸ್ಯೆ ಆಗುತ್ತದೆ. ಸೆಸ್ಕ್ ವಿರುದ್ಧ ಸಾರ್ವಜನಿಕರಿಂದ ವ್ಯಾಪಕವಾದ ದೂರುಗಳಿವೆ. ರೈತರಿಗೆ ಸಮಸ್ಯೆ ಆಗದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ವಿದ್ಯುತ್ ಪರಿವರ್ತಕಗಳು ಹಾನಿಗೊಳಗಾದಾಗ ತಕ್ಷಣ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸೆಸ್ಕ್ ಮುಖ್ಯ ಇಂಜಿನಿಯರ್ ಮೋಹನ್, ಸಹಾಯಕ ಇಂಜಿನಿಯರ್‌ಗೆ ನಿರ್ದೇಶನ ನೀಡಿದರು.

ರೈತರು ಹಾಗೂ ಅರಣ್ಯ ಇಲಾಖೆಯ ನಡುವೆ ಹೆಚ್ಚಿನ ತಿಕ್ಕಾಟಗಳು ನಡೆಯುತ್ತಿದೆ. ಬಗರ್ ಹುಕುಂ ಅರ್ಜಿ ಸಲ್ಲಿಸಿರುವ ರೈತರಿಗೆ ತೊಂದರೆ ಆಗದಂತೆ ಅರಣ್ಯ ಇಲಾಖೆಯವರು ಎಚ್ಚರಿಕೆ ವಹಿಸಬೇಕು. ಅರಣ್ಯ ಸಮೀಪ ಇರುವವರಿಗೆ ತೊಂದರೆ ಕೊಡಬಾರದು ಎಂದು ವಲಯಾರಣ್ಯ ಅಧಿಕಾರಿಗೆ ಸಲಹೆ ನೀಡಿದರು.

ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕೆರೆ-ಕಟ್ಟೆಗಳಿಗೆ ನೀರುಣಿಸಲು ಏತನೀರಾವರಿ ನೀರು ಹರಿಸುವಂತೆ ಬಹುತೇಕ ರೈತರಿಂದ ಮನವಿ ಇದೆ ಎಂದ ಸಂಸದರ ಮಾತಿಗೆ, ನದಿ ನೀರಿನ ಮಟ್ಟ ಆಧರಿಸಿ ಏತ ನೀರಾವರಿ ಅನುಕೂಲ ಒದಗಿಸಬಹುದು ಎಂದು ಎಇಇ ಸಮಜಾಯಿಸಿ ನೀಡಿದರು.

ನೀರಾವರಿ ಇಲಾಖೆಯಿಂದ ಸೆಸ್ಕ್‌ಗೆ ಕೋಟ್ಯಂತ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಸೆಸ್ಕ್ ಇಇ ಮೋಹನ್ ತಿಳಿಸಿದರು.

ಅನಾರೋಗ್ಯಕ್ಕೆ ಒಳಗಾಗಿ ಬರುವ ಬಡವರೊಂದಿಗೆ ಆಸ್ಪತ್ರೆಯ ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ಸಹಕರಿಸಬೇಕು. ಅಗತ್ಯ ಸೌಲಭ್ಯ ಬೇಕಿದ್ದಲ್ಲಿ ಸರ್ಕಾರದಿಂದ ಕೊಡಿಸುವ ಭರವಸೆ ನೀಡಿದ ಸಂಸದ ಶ್ರೇಯಸ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಧನಶೇಖರ್‌ಗೆ ಎಚ್ಚರಿಸಿದರು. ಇಕೋ ಪರೀಕ್ಷೆ ಯಂತ್ರ ಕೊಡಿಸುವುದಾಗಿ ಭರವಸೆ ನೀಡಿದರು. ಖಾಲಿ ಇರುವ ರೇಡಿಯೋಲಜಿಸ್ಟ್ ಭರ್ತಿ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಬಳಿ ಸಮಾಲೋಚಿಸುವುದಾಗಿ ತಿಳಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಕಾಳಜಿಯುತ ಕಾರ್ಯಕ್ರಮ ರೂಪಿಸಿ ಉತ್ತಮ ಫಲಿತಾಂಶ ನಿರೀಕ್ಷಿಸುವುದಾಗಿ ಬಿಇಒ ಸೋಮಲಿಂಗೇಗೌಡರಿಗೆ ಸೂಚನೆ ನೀಡಲಾಯಿತು.

ಕೃಷಿ ಇಲಾಖೆಯಿಂದ ರೈತರಿಗೆ ಹಿಂಗಾರು. ಮುಂಗಾರು ಬೆಳೆಗಳಿಗೆ ಅಗತ್ಯ ಗೊಬ್ಬರ, ಬೆಳೆ ರಕ್ಷಣೆಗೆ ಬೇಕಿರುವ ಟಾರ್ಪಾಲ್ ಹಾಗೂ ಕೃಷಿ ಯಂತ್ರೋಪಕರಣಗಳು ಸರ್ಕಾರದಿಂದ ಬಂದ ತಕ್ಷಣ ನಿಯಮಾನುಸಾರ ವಿತರಿಸಬೇಕು. ರೈತರಿಗೆ ತೊಂದರೆ ಆಗಬಾರದು ಎಂದು ಕೃಷಿ ಸಹಾಯಕ ನಿರ್ದೇಶಕಿ ಸ್ವಪ್ನ ಅವರಿಗೆ ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ನಡೆಯಬೇಕು. ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು. ಗ್ರಾಮೀಣ ಭಾಗದ ನಾಗರಿಕರಿಗೆ ಗ್ರಾಮ ಪಂಚಾಯಿತಿಯಿಂದ ತೊಂದರೆ ಆಗಬಾರದು. ಉತ್ತಮ ರೀತಿಯಲ್ಲಿ ಪ್ರಗತಿ ನಡೆಸಿ ಎಂದು ಇಒ ಮುನಿಸ್ವಾಮಿಗೆ ಸೂಚಿಸಿದರು.

ಪಟ್ಟಣದ ಒಳಚರಂಡಿ ನೀರು ಸಂಪೂರ್ಣ ನದಿಗೆ ಸೇರುತ್ತಿರುವುದು ಹೇಮಾವತಿ ಮಲಿನಗೊಳ್ಳಲು ಕಾರಣವಾಗುತ್ತಿದೆ. ನದಿಗೆ ಮಲ ಮಿಶ್ರಿತ ನೀರು ಸೇರದಂತೆ ಕ್ರಮ ಕೈಗೊಳ್ಳಲೇಬೇಕು. ಪಟ್ಟಣದ ಎಲ್ಲ 23 ವಾರ್ಡ್‌ಗಳಿಗೂ ಸ್ವಚ್ಛತೆಯ ವಿಷಯದಲ್ಲಿ ಉತ್ತಮ ಕೆಲಸ ನಿರ್ವಹಿಸಬೇಕು. ಪಟ್ಟಣದ ಸ್ವಚ್ಛತೆ ತೃಪ್ತಿಕರವಾಗಿಲ್ಲ. ಎಲ್ಲ ಪೌರಕಾರ್ಮಿಕರನ್ನು ವಿಶ್ವಾಸದಿಂದ ಬಳಸಿಕೊಂಡು ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು ಎಂದು ಪುರಸಭೆ ಅಧಿಕಾರಿ ಶಿವಶಂಕರ್ ಅವರಿಗೆ ಸೂಚಿಸಿದರು.

ತಹಸೀಲ್ದಾರ್ ರೇಣುಕುಮಾರ್, ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.