ಜಿಲ್ಲೆ

ಷಟ್ಪಥ ರಸ್ತೆ ಕಾಮಗಾರಿ ತ್ವರಿತಗೊಳಿಸಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ-ಬೆಳಗಾವಿ-ಕೊಲ್ಲಾಪುರ ಮಾರ್ಗವಾಗಿ ಪುಣೆಗೆ ಸಂರ್ಪಸುವ ರಾಷ್ಟ್ರೀಯ ಹೆದ್ದಾರಿ-48 ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಕಳೆದ 2-3 ವರ್ಷಗಳಿಂದ ನಿಧಾನವಾಗಿ ಸಾಗಿರುವ ಈ ಮಾರ್ಗದ ಷಟ್ಪಥ ರಸ್ತೆ ಕಾಮಗಾರಿಯನ್ನು ತ್ವರಿತಗೊಳಿಸಬೇಕೆಂದು ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯದ ಸಲಹಾ ಸಮಿತಿಯ ಮಾಜಿ ಸದಸ್ಯ ಮಹೇಂದ್ರ ಸಿಂಘಿ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತೀನ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-48ರ ದುಸ್ಥಿತಿಯಿಂದ ಹುಬ್ಬಳ್ಳಿಯಿಂದ ಪುಣೆಗೆ ಐಷಾರಾಮಿ ಕಾರಿನಲ್ಲೂ ಸಂಚರಿಸಲು 9ರಿಂದ 11 ತಾಸು ಹಿಡಿಯುತ್ತಿದೆ. ರಸ್ತೆ ಸರಿಯಾಗಿದ್ದರೆ 5 ತಾಸಿನಲ್ಲಿ ತಲುಪಲು ಸಾಧ್ಯ. ಈ ಮಾರ್ಗದ ಕೆಲ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಅಸ್ತಿತ್ವದಲ್ಲಿ ಇಲ್ಲ. ವಾಹನ ಸವಾರರು ಸರ್ವಿಸ್ ರಸ್ತೆಯನ್ನು ಅವಲಂಬಿಸಬೇಕಾಗಿದೆ. ತಗ್ಗು ಗುಂಡಿ ಹಾಗೂ ಸ್ಪೀಡ್ ಬ್ರೇಕರ್​ಗಳಿಂದ ಸರ್ವಿಸ್ ರಸ್ತೆಯಲ್ಲಿ ಸಂಚಾರ ಅಯೋಮಯವಾಗಿದೆ. ಸಿಗ್ನಲ್​ಗಳು ಸರಿಯಾಗಿ ಇಲ್ಲ. ಮಳೆ ಬಂದಾಗ ಅಪಘಾತ ಸಂಭವಿಸುವ ಅಪಾಯ ಇನ್ನು ಹೆಚ್ಚಿರುತ್ತದೆ ಎಂದು ವಿವರಿಸಿದ್ದಾರೆ.

ಹುಬ್ಬಳ್ಳಿ-ಬೆಳಗಾವಿ-ಕೊಲ್ಲಾಪುರ ಮಾರ್ಗವಾಗಿ ಪುಣೆಗೆ ಸಂರ್ಪಸುವ ರಾಷ್ಟ್ರೀಯ ಹೆದ್ದಾರಿ-48 ಅನ್ನು ಷಟ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕಳೆದ 2-3 ವರ್ಷಗಳಿಂದ ನಡೆಯುತ್ತಿದೆ. ಅಪಾರ ವಾಹನ ದಟ್ಟಣೆಯಿರುವ ಈ ಮಾರ್ಗದಲ್ಲಿ ಇಂಥ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ ಇಷ್ಟೊಂದು ಕೆಟ್ಟದಾಗಿರುವಾಗ ಟೋಲ್ ಸಂಗ್ರಹಿಸುವ ಅಗತ್ಯವಾದರೂ ಏನಿದೆ ? ಹೆದ್ದಾರಿ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸದಿದ್ದರೆ ಟೋಲ್ ಯಾಕೆ ಸಂಗ್ರಹಿಸಬೇಕು ? ಎಂದು ಪ್ರಶ್ನಿಸಿದ್ದಾರೆ.